ಬೆಂಗಳೂರು : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಇಂದು ಬೆಳಗ್ಗೆ 11 ಗಂಟೆಗೆ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ‘ಜಾತಿ ಗಣತಿ’ ಸಮಾಲೋಚನಾ ಸಭೆ ನಡೆಯಲಿದೆ.
ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಸಭೆಯ ಸಾನ್ನಿಧ್ಯ ವಹಿಸಲಿದ್ದಾರೆ. ಇನ್ನು ಈ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್ .ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಆಡಳಿತ ಪಕ್ಷದ ಸಚಿವರು, ಮಾಜಿ ಸಚಿವರು, ಶಾಸಕರು, ಒಕ್ಕಲಿಗರ ಸಂಘದ ನಿರ್ದೇಶಕರು, ಸಂಘ-ಸಂಸ್ಥೆಗಳ ಪ್ರಮುಖರು, ಸಮುದಾಯದ ಮುಖಂಡರು ಭಾಗಿಯಾಗಲಿದ್ದಾರೆ.
ಸರ್ಕಾರದ ತೀರ್ಮಾನದಿಂದ ಸಮುದಾಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುವುದು, ಸಮೀಕ್ಷೆ ಗೊಂದಲ, ಸಮುದಾಯದ ರಾಜಕೀಯ ನಿಲುವೇನು? ಸೇರಿ ಇತರ ವಿಚಾರಗಳ ಕುರಿತು ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಲಿದೆ. ಜೊತೆಗೆ, ಸಮುದಾಯ ಒಗ್ಗಟ್ಟಿನಿಂದ ಇದೆ ಎಂಬ ಸಂದೇಶ ಸಾರುವುದು ಸಭೆಯ ಮುಖ್ಯ ಉದ್ದೇಶವೂ ಆಗಿದೆ.
ಒಕ್ಕಲಿಗ ಎಂದೇ ಬರೆಸಿ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ (ಜಾತಿ ಜನಗಣತಿ) ಸಮೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜನಾಂಗದ ಸಂಘ ಸಂಸ್ಥೆಗಳು ತಿಂಗಳಿಂದ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಮುದಾಯದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದೆ. ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ಒಕ್ಕಲಿಗ’ ಎಂದು ಬರೆಸಬೇಕು ಎಂದು ಜನಾಂಗದವರಿಗೆ ತಿಳಿಹೇಳಿದೆ. ತಪ್ಪು ಮಾಹಿತಿ ಅಥವಾ ಸಮೀಕ್ಷೆಯಲ್ಲಿ ಭಾಗಿಯಾಗದಿದ್ದರೆ ಶಿಕ್ಷಣ, ಉದ್ಯೋಗ, ರಾಜಕೀಯ ಸ್ಥಾನಮಾನದಿಂದ ವಂಚಿತರಾಗಲಿದ್ದು, ಈ ಬಗ್ಗೆ ಮುಂಜಾಗ್ರತೆ ವಹಿಸಿ ಸೂಕ್ತ ಮಾಹಿತಿ ನಮೂದಿಸಬೇಕು ಎಂದು ಸಲಹೆ ನೀಡಿದೆ.
ಇದನ್ನೂ ಓದಿ : ಆಯುಧ ಪೂಜೆ ನೆಪದಲ್ಲಿ ಬೆಂಗಳೂರಿನ ಇನ್ಸ್ಪೆಕ್ಟರ್ಗಳ ಭರ್ಜರಿ ರೋಲ್ಕಾಲ್ – ಪ್ರತಿ ಪೊಲೀಸ್ ಠಾಣೆಯಲ್ಲೂ ಕೋಟಿ ಕೋಟಿ ಕಲೆಕ್ಷನ್!







