KMFನಿಂದ ಗ್ರಾಹಕರಿಗೆ ಗುಡ್​ ನ್ಯೂಸ್.. ಸೆ.22ರಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ!

ಬೆಂಗಳೂರು : ಬೆಲೆ ಏರಿಕೆ ಸುದ್ದಿಗಳ ನಡುವೆ ಕರ್ನಾಟಕದ ಹೆಮ್ಮೆಯ ಸಂಸ್ಥೆ ಕೆಎಂಎಫ್‌ (KMF) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ.  ಕೇಂದ್ರ ಸರ್ಕಾರ ಈಗಾಗಲೇ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ನಂದಿನಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಚೀಸ್ ಸೇರಿ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಸೋಮವಾರದಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ಕೇಂದ್ರ ಸರ್ಕಾರ ಸೆ.22ರಿಂದ ಅನ್ವಯವಾಗುವಂತೆ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದೆ. ಇದರಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಈ ಕುರಿತು ಕೆಎಂಎಫ್‌ ಆಡಳಿತ ಮಂಡಳಿ ಮತ್ತು ಹಿರಿಯ ಅಧಿಕಾರಿಗಳು ಸಭೆ ಸೇರಿದ್ದು, ಕೇಂದ್ರದ ಸೂಚನೆಯಂತೆ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಇಂದು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

ಪನ್ನೀರ್‌ ಮತ್ತು ಗುಡ್‌ ಲೈಫ್‌ ಹಾಲಿಗೆ ವಿಧಿಸುತ್ತಿದ್ದ ಜಿಎಸ್‌ಟಿ ಶೇ.5ರಷ್ಟಿತ್ತು. ಇದೀಗ ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತುಪ್ಪ, ಬೆಣ್ಣೆ, ಚೀಸ್‌, ಪನ್ನೀರ್‌ ಹಾಗೂ ಇತರೆ ಕುರಕಲು ತಿಂಡಿಗಳ ಜಿಎಸ್‌ಟಿ ದರವು ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ಈ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಲಿದೆ. ಕುಕ್ಕೀಸ್‌, ಚಾಕೋಲೆಟ್‌, ಐಸ್‌ಕ್ರೀಂ, ನೀರಿನ ಉತ್ಪನ್ನಗಳಿಗೆ ವಿಧಿಸುತ್ತಿದ್ದ ಜಿಎಸ್‌ಟಿ ಶೇ.18ರಷ್ಟಿತ್ತು. ಇದೀಗ ಈ ಉತ್ಪನ್ನಗಳ ಜಿಎಸ್‌ಟಿ ದರವನ್ನು ಶೇ.5ಕ್ಕೆ ಇಳಿಕೆಯಾಗಲಿದೆ. ಆದರೆ, ಕಾರ್ಬೋನೇಟೆಡ್‌ ಪಾನಿಯಗಳ ಮೇಲಿನ ಜಿಎಸ್‌ಟಿ ಹಾಲಿ ಶೇ.28ರಷ್ಟಿದ್ದು, ಶೇ.40ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ದರ ಸೆ. 22ರಿಂದಲೇ ಜಾರಿಗೆ ಬರಲಿದೆ. ಜಿಎಸ್‌ಟಿ ಇಳಿಕೆಯಿಂದ ಮೊಸರಿನ ದರ ಲೀಟರ್‌ಗೆ 4 ರೂ.ವರೆಗೆ ಕಡಿಮೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ : ಏಷ್ಯಾಕಪ್​ನಲ್ಲಿ ಹೋರಾಡಿ ಸೋತ ಒಮಾನ್.. ಹ್ಯಾಟ್ರಿಕ್ ಜಯದೊಂದಿಗೆ ಸೂಪರ್​-4 ಹಂತಕ್ಕೆ ಲಗ್ಗೆ ಇಟ್ಟ ಭಾರತ!

Btv Kannada
Author: Btv Kannada

Read More