ಬೆಂಗಳೂರು : KAS ಅಧಿಕಾರಿ ಸುಧಾ ಮತ್ತು ಅವರ ಪತಿ ಎಸ್.ಜೋಸೆಫ್ ವಿರುದ್ಧದ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಸಂಪಾದನೆ ಆರೋಪ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣದ ವಿಚಾರಣೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದಿಲ್ಲ ಎಂದು ಸುಧಾ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಿ ಕ್ಲೀನ್ ಚಿಟ್ ಪಡೆಯುವುದು ಅರ್ಜಿದಾರರಿಗೆ ಬಿಟ್ಟ ವಿಚಾರ ಎಂದು ಹೇಳಿದೆ.
ತನಿಖೆಯ ವೇಳೆ ಸಂಗ್ರಹ ಮಾಡಿರುವ ದಾಖಲೆಗಳ ಆಧಾರದಲ್ಲಿ ಹೇಳುವುದಾದರೆ ಮೇಲ್ನೋಟಕ್ಕೆ ‘ಇದೊಂದು ಭಾರಿ ಭ್ರಷ್ಟಾಚಾರದ ಪ್ರಕರಣ’ ಎನ್ನಬಹುದು. ಹಾಗಾಗಿ, ಪೂರ್ಣ ಪ್ರಮಾಣದ ವಿಚಾರಣೆ ಅಗತ್ಯವಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಸುಧಾ ಅವರು ಬೆಂಗಳೂರು ನಗರ, ದೊಡ್ಡಬಳ್ಳಾಪುರದಲ್ಲಿ ಆಸ್ತಿ ಮತ್ತು ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬ್ರಹ್ಮಾವರಗಳಲ್ಲಿ ಕೃಷಿ ಭೂಮಿ ಹೊಂದಿರುವುದು ತನಿಖೆಯ ವೇಳೆ ಕಂಡು ಬಂದಿತ್ತು. ಈ ಆಸ್ತಿಗಳ ಮಾರುಕಟ್ಟೆ ಮೌಲ್ಯ 11.7 ಕೋಟಿ ರೂ.ಗಳಷ್ಟಿದ್ದರೂ ಅದನ್ನು ಕೇವಲ 1.8 ಕೋಟಿ ರೂ. ಎಂದು ತೋರಿಸಲಾಗಿತ್ತು. 9.3 ಕೋಟಿ ರೂ. ನಗದು ವಹಿವಾಟು ನಡೆಸಿದ್ದು, ಅದರಲ್ಲಿ 2.9 ಕೋಟಿ ರೂ. ನಗದನ್ನು ಕೊಡಿಗೇಹಳ್ಳಿಯಲ್ಲಿ ವಿಲ್ಲಾ ಖರೀದಿ ಮತ್ತು 1.6 ಕೋಟಿ ರೂ. ನಗದನ್ನು ಶಿವನಹಳ್ಳಿಯಲ್ಲಿ ಅಪಾರ್ಟ್‌ಮೆಂಟ್ ಖರೀದಿಗೆ ಪಾವತಿಸಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ಹೇಳಿತ್ತು.
ಪ್ರಕರಣದ ಹಿನ್ನೆಲೆ : ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರ ಖಾಸಗಿ ದೂರು ಆಧರಿಸಿ 2020ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಭೂಸ್ವಾಧೀನಾಧಿಕಾರಿ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ, ಎಚ್‌ಆರ್‌ಬಿಆರ್ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳ ಉಸ್ತುವಾರಿ ಹೊತ್ತಿದ್ದ ಸುಧಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಭೂ ಮಾಲೀಕರಿಂದ ಅವರ ಪರ ಆದೇಶ ಹೊರಡಿಸಲು ಪ್ರತಿ ಎಕರೆಗೆ ಸುಮಾರು 5 ಲಕ್ಷ ರೂ.ಗಳವರೆಗೆ ಅಕ್ರಮವಾಗಿ ಲಂಚ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ : ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ – ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಸಚಿವ ಪರಮೇಶ್ವರ್ ಸೂಚನೆ!







