ಸನ್‌ರೈಸರ್ಸ್‌ಗೆ ಹ್ಯಾಟ್ರಿಕ್ ಸೋಲಿನ ಶಾಕ್ – 80 ರನ್‌ಗಳಿಂದ KKRಗೆ ಶರಣಾದ SRH!

ಕೋಲ್ಕತ್ತಾ : ಅಜಿಂಕ್ಯ ರಹಾನೆ ನೇತೃತ್ವದ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 80ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ IPL ಪ್ರಸಕ್ತ ಆವೃತ್ತಿಯಲ್ಲಿ KKR 2ನೇ ಗೆಲುವನ್ನು ತನ್ನದಾಗಿಸಿಕೊಂಡಿದೆ. ಇನ್ನೂ ಮೊದಲ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಆರೆಂಜ್‌ ಆರ್ಮಿ (SHR) ಈ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 3ನೇ ಸೋಲು ಕಂಡಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಕೋಲ್ಕತ್ತಾ, 6 ವಿಕೆಟ್‌ ನಷ್ಟಕ್ಕೆ 200 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ 16.4 ಓವರ್‌ಗಳಲ್ಲಿ 120 ರನ್‌ ಕಲೆ ಹಾಕಿ ಆಲೌಟ್‌ ಆಯಿತು.

ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 29 ಎಸೆತಗಳಲ್ಲಿ 3 ಸಿಕ್ಸರ್‌, 7 ಬೌಂಡರಿ ನೆರವಿಂದ 60 ರನ್‌, ಆಂಗ್ಕ್ರಿಶ್ ರಘುವಂಶಿ 32 ಎಸೆತಗಳಲ್ಲಿ 2 ಸಿಕ್ಸರ್‌, 5 ಬೌಂಡರಿ ನೆರವಿಂದ 50 ರನ್‌, ಅಜಿಂಕ್ಯ ರಹಾನೆ 27 ಎಸೆತಗಳಲ್ಲಿ 4 ಸಿಕ್ಸರ್‌, 1 ಬೌಂಡರಿ ನೆರವಿನಿಂದ 38 ರನ್‌, ರಿಂಕು ಸಿಂಗ್ 17 ಎಸೆತಗಳಲ್ಲಿ 1 ಸಿಕ್ಸರ್‌, 4 ಬೌಂಡರಿ ನೆರವಿನಿಂದ 32 ರನ್‌ ಕಲೆ ಹಾಕಿದರು. ಈ ಮೂಲಕ SHRಗೆ 201 ರನ್‌ಗಳ ದೊಡ್ಡ ಟಾರ್ಗೆಟ್ ನೀಡಿತು.

ಕೆಕೆಆರ್ ನೀಡಿದ 201 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲಿಯೇ ಮತ್ತೆ ವೈಫಲ್ಯ ಕಂಡಿದ್ದು, ಟ್ರಾವಿಸ್ ಹೆಡ್ (4), ಅಭಿಷೇಕ್ ಶರ್ಮಾ (2) ಮತ್ತು ಇಶಾನ್ ಕಿಶನ್ (2) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಕೆಕೆಆರ್ ಬೌಲರ್​ಗಳು, ಹೈದರಾಬಾದ್ ತಂಡವನ್ನು ಕೇವಲ 120 ರನ್‌ಗಳಿಗೆ ಆಲೌಟ್ ಮಾಡಿ ಪಂದ್ಯದಲ್ಲಿ ಗೆದ್ದು ಬೀಗಿತು.

ಇದನ್ನೂ ಓದಿ : ಐತಿಹಾಸಿಕ ಕರಗಕ್ಕೆ ಬೆಂಗಳೂರು ಸಜ್ಜು.. ಇಂದಿನಿಂದ ಉತ್ಸವದ ವಿಧಿ-ವಿಧಾನ ಆರಂಭ!

Btv Kannada
Author: Btv Kannada

Read More