ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ “45” ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ ಸಿನಿಮಾ ಈಗಾಗಲೇ ಹಲವು ವಿಶೇಷಗಳಿಂದ “45” ಎಲ್ಲರ ಗಮನ ಸೆಳೆದಿದೆ. ಚಿತ್ರದ ನಾಯಕರಲ್ಲೊಬ್ಬರಾದ ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಶೇಷವಾದ ಬೈಕ್ ಅನಾವರಣ ಮಾಡುವ ಮೂಲಕ “45” ಚಿತ್ರತಂಡ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಈ ಬೈಕ್ “45” ಚಿತ್ರದಲ್ಲಿ ಉಪೇಂದ್ರ ಅವರು ಓಡಿಸುವ ಬೈಕ್ ಆಗಿದೆ. ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಟ ಉಪೇಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕ ಅರ್ಜುನ್ ಜನ್ಯ ಅವರು, ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಂತರ ಇಂದು ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಅನಾವರಣಗೊಂಡಿರುವ ಈ ವಿಶೇಷ ಬೈಕ್ ಅನ್ನು ನಮ್ಮ ಚಿತ್ರದಲ್ಲಿ ಉಪೇಂದ್ರ ಅವರೆ ಓಡಿಸುತ್ತಿರುತ್ತಾರೆ. ನಮ್ಮ ಸಿನಿಮಾದಲ್ಲಿ ಇದು ಒಂದು ಪಾತ್ರ ಎಂದು ಹೇಳಬಹುದು. ಇಂದಿನಿಂದ ಚಿತ್ರ ಬಿಡುಗಡೆಯವರೆಗೂ ಈ ಬೈಕ್ನ ಸಂಚಾರ ಆರಂಭವಾಗಲಿದೆ. ಉಪೇಂದ್ರ ಅವರ ಅಭಿಮಾನಿಗಳು ಈ ಬೈಕ್ನ ಜೊತೆಗೆ ರೀಲ್ ಮಾಡಬಹುದು. ಸೆಲ್ಫಿ ತೆಗೆದುಕೊಳ್ಳಬಹುದು. ಅದನ್ನು ನಮಗೆ ಅಥವಾ ಉಪೇಂದ್ರ ಅವರಿಗೆ ಟ್ಯಾಗ್ ಮಾಡಬಹುದು. ಅದನ್ನು ಉಪೇಂದ್ರ ಅವರು ವೀಕ್ಷಿಸಲಿದ್ದಾರೆ ಎಂದರು.

ನಿರ್ದೇಶಕರು ಹೇಳಿದ ಹಾಗೆ ನಮ್ಮ ಚಿತ್ರದಲ್ಲಿ ಈ ವಿಶೇಷ ಬೈಕ್ ಕೂಡ ಒಂದು ಪಾತ್ರ. ಉಪೇಂದ್ರ ಅವರು ಈ ಬೈಕ್ ಓಡಿಸುವ ಸನ್ನಿವೇಶಗಳನ್ನು ನೀವು ಚಿತ್ರದಲ್ಲೇ ನೋಡಬೇಕು. ಈ ಬೈಕ್ ನಿರ್ಮಾಣಕ್ಕೆ ಬಹಳ ದಿನಗಳೆ ತೆಗೆದುಕೊಂಡಿದೆ. ಉಪೇಂದ್ರ ಅವರ ಅಭಿಮಾನಿಗಳು ಇದರ ಜೊತೆಗೆ ಫೋಟೊ ತೆಗೆದುಕೊಂಡು ನಮ್ಮ ತಂಡದವರಿಗೆ ಟ್ಯಾಗ್ ಮಾಡಬಹುದು ಎಂದು ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದರು.

ನಿಮ್ಮೆಲ್ಲರ ಪ್ರೀತಿಗೆ ಮನ ತುಂಬಿ ಬಂದಿದೆ. ನಿಮ್ಮಿಂದಲೇ ನಾನು ಅಷ್ಟೇ. ಸಾಮಾನ್ಯವಾಗಿ ಹುಟ್ಟುಹಬ್ಬದ ದಿನ ಟೀಸರ್, ಪೋಸ್ಟರ್ ಮುಂತಾದವುಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ “45” ಚಿತ್ರತಂಡ ಈ ಬೈಕ್ ಅನಾವರಣ ಮಾಡಿದ್ದು ವಿಶೇಷವಾಗಿದೆ. ಎಲ್ಲರ ಪ್ರೀತಿಗೆ ಅನಂತ ಧನ್ಯವಾದ ಎಂದರು ನಾಯಕ ಉಪೇಂದ್ರ. “45” ಚಿತ್ರ ಇದೇ ಡಿಸೆಂಬರ್ 25 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ : ಕೊಡಿಗೇಹಳ್ಳಿ ಇನ್ಸ್ಪೆಕ್ಟರ್ ಮುತ್ತುರಾಜ್ ವಿರುದ್ಧ ಪಿತೂರಿ ಬಯಲಿಗೆ!







