ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಹೇಳಿಕೊಂಡು ಬಂದಾಗಿನಿಂದ ಧರ್ಮಸ್ಥಳ ಪ್ರಕರಣದ ತನಿಖೆ ಭಾರೀ ಚುರುಕು ಪಡೆದುಕೊಂಡಿದೆ. ಆರಂಭದಲ್ಲಿ ನೇತ್ರಾವತಿ ಸುತ್ತ ಮುತ್ತ ಎಸ್‌ಐಟಿ ಬುರುಡೆಗಾಗಿ ಶೋಧ ನಡೆಸಿ, ಏನೂ ಸಿಗದೆ ವಾಪಾಸಾಗಿತ್ತು. ಆದ್ರೆ ಧರ್ಮಸ್ಥಳ ಪ್ರಕರಣ ಇದೀಗ ಮತ್ತೊಂದು ಹಾದಿ ಹಿಡಿದಿದೆ.

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಹೇಳಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಸದ್ಯ ಜೈಲು ಸೇರಿದ್ದಾನೆ. ಆದ್ರೆ ಈ ನಡುವೆ ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ಶವಗಳ ರಾಶಿ ಇದೆ ಎಂದು ಆರೋಪಿಸಿದ್ದರು. ಇದೇ ಹೇಳಿಕೆ ಮತ್ತೊಮ್ಮೆ ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿತ್ತು. ಈ ಹೇಳಿಕೆ ಆಧರಿಸಿ ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡಕ್ಕೆ ಪ್ರವೇಶ ಮಾಡಿದ್ದು, ಶೋಧಕಾರ್ಯ ನಡೆಸುತ್ತಿದ್ದಾರೆ. ನೇತ್ರಾವತಿ ನದಿ ದಡದ ಬಂಗ್ಲೆಗುಡ್ಡಕ್ಕೆ ನಿನ್ನೆ ಎಸ್‌ಐಟಿ ಎಂಟ್ರಿ ಕೊಟ್ಟಿದ್ದು, ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸುಮಾರು 7 ಗಂಟೆಗಳ ಕಾಲ ಮಹಜರು ನಡೆದಿದೆ.

ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಮಹಜರಿನಲ್ಲಿ ಭಾಗಿಯಾಗಿದ್ದರು. 13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದ್ದು, ಈ ವೇಳೆ 5 ತಲೆಬುರಡೆ, 100ಕ್ಕೂ ಹೆಚ್ಚು ಮೂಳೆಗಳು ಸಿಕ್ಕಿವೆ ಎನ್ನಲಾಗಿದೆ. ಪಾಯಿಂಟ್ 11ರ ಆಸುಪಾಸಿನಲ್ಲಿ ಭೂಮಿಯ ಮೇಲ್ಭಾಗದಲ್ಲೇ ಮಾನವನ ಮೂಳೆಗಳು ಪತ್ತೆಯಾಗಿದ್ದು, ಮೂಳೆ ಪತ್ತೆಯಾದ ಸ್ಥಳದಲ್ಲೇ ಬಟ್ಟೆಯ ತುಂಡುಗಳೂ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಸದ್ಯ ಮೂಳೆಗಳನ್ನು ಪೈಪ್‌ಗಳಲ್ಲಿ ಸಂಗ್ರಹಿಸಿ, ಮಣ್ಣಿನ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಒಟ್ಟಿನಲ್ಲಿ ಬಂಗ್ಲೆಗುಡ್ಡದಲ್ಲಿ ಸಿಕ್ಕ ತಲೆಬುರುಡೆ, ಮೂಳೆಗಳು ತನಿಖೆಯನ್ನ ಹೊಸ ದಿಕ್ಕಿಗೆ ಹೊರಳಿಸಿದ್ದು, ಇದರಿಂದ ಹೊಸ ಕಥೆ ಹೊರಗೆ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಡಾ. ವಿಷ್ಣುವರ್ಧನ್ ಕುಟುಂಬದ ಬಗ್ಗೆ ಅಶ್ಲೀಲ ಕಾಮೆಂಟ್ಸ್ – ದೂರು ದಾಖಲಿಸಿದ ಅಳಿಯ ಅನಿರುದ್ಧ್!







