ಬೆಂಗಳೂರು : ‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಿಡಿಗೇಡಿಗಳು ಅಳಿಯ ಅನಿರುದ್ಧ್ ಹಾಗೂ ಅವರ ಕುಟುಂಬದವರನ್ನು ನಿಂದಿಸಿ ಅಶ್ಲೀಲ ಪದಗಳಿಂದ ಕಾಮೆಂಟ್ಸ್ಗಳನ್ನು ಹಾಕುತ್ತಿದ್ದು, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಟ ಅನಿರುದ್ಧ್ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಅಪರಿಚಿತರ ವಿರುದ್ಧ ಎನ್‌ಸಿಆರ್ ದಾಖಲಿಸಲಾಗಿದೆ.

ದೂರಿನಲ್ಲಿ ಏನಿದೆ? ”ಅಭಿಮಾನ್ ಸ್ಟುಡಿಯೋದಲ್ಲಿನ ನನ್ನ ಮಾವ ವಿಷ್ಣುವರ್ಧನ್ ಅವರ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಈ ವಿಚಾರವನ್ನು ಮುಂದಿಟ್ಟು ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ಕುಟುಂಬದ ಕುರಿತು ಕೆಟ್ಟ, ಅಶ್ಲೀಲ ಪದಗಳಿಂದ ಕಾಮೆಂಟ್ ಹಾಕುತ್ತಿದ್ದಾರೆ. ಹೀಗಾಗಿ, ಅಂಥವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು” ಎಂದು ವಿಷ್ಣುವರ್ಧನ್ ನಟ ಅನಿರುದ್ಧ್ ದೂರಿನಲ್ಲಿ ಕೋರಿದ್ದಾರೆ.
ನೆಗೆಟಿವ್ ಆಗಿ ಕಾಮೆಂಟ್ ಮಾಡಬೇಡಿ : ”ನಾನು ಕೈಮುಗಿದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ, ದಯವಿಟ್ಟು ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಯಾವುದೇ ವೇದಿಕೆ ಮೇಲಾದರೂ ಸರಿ, ಸಾಮಾಜಿಕ ಜಾಲತಾಣದಲ್ಲಾದರೂ ಸರಿ ನೆಗೆಟಿವ್ ಆಗಿ ಕಾಮೆಂಟ್ ಮಾಡಬೇಡಿ. ಯಾವುದೇ ರೀತಿಯ ಸಮಸ್ಯೆಗಳಿಗೆ ಸಿಲುಕಿಕೊಳ್ಳಬೇಡಿ” ಎಂದು ನಟ ಅನಿರುದ್ಧ್ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿ ಅಸಮಾಧಾನ – ಆಂಧ್ರಕ್ಕೆ ಬನ್ನಿ ಎಂದ ಸಚಿವ ನಾರಾ ಲೋಕೇಶ್!







