ವಿಜಯಪುರ : ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬ್ಯಾಂಕ್‌ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್‌ನಲ್ಲಿ ಭಾರೀ ದೊಡ್ಡ ದರೋಡೆ ನಡೆದಿದೆ.

ಸಿನಿಮೀಯ ರೀತಿಯಲ್ಲಿ ಬ್ಯಾಂಕ್‌ಗೆ ಎಂಟ್ರಿ ಕೊಟ್ಟ ಮುಸುಕುಧಾರಿ ಕಳ್ಳರು, ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಗಳಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ಕಟ್ಟಿಹಾಕಿ ಕೇವಲ 20 ನಿಮಿಷದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್‌ಗೆ 10ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಈ ಕೃತ್ಯ ಎಸಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಎಷ್ಟು ಹಣ ಕಳ್ಳತನದ ಆಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 8 ಕೋಟಿ ರೂ. ನಗದು ಹಣ ಹಾಗೂ ಸುಮಾರು 50 ಕೆಜಿಗೂ ಅಧಿಕ ಚಿನ್ನಾಭರಣ ದರೋಡೆಯಾಗಿರೋ ಶಂಕೆ ವ್ಯಕ್ತವಾಗಿದೆ. ಪೊಲೀಸರು ಬ್ಯಾಂಕಿನ ಸಿಸಿ ಕ್ಯಾಮೆರಾ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೇ ರಸ್ತೆಗಳಿಗೂ ಪೊಲೀಸರು ನಾಕಾ ಬಂದಿ ಹಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನೂ ದರೋಡೆಕೋರರು ಕಾರಿನೊಂದು ಪರಾರಿಯಾಗುವ ವೇಳೆ ಮಹಾರಾಷ್ಟ್ರದ ಹುಲಜಂತಿ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಕುರಿಗಾಯಿಗಳು ಕಾರನ್ನು ಅಡ್ಡಗಟ್ಟಿದಾಗ ಸ್ಥಳದಲ್ಲೇ ಕಾರು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಜನರು ಕಾರಿನಲ್ಲಿ ಇದ್ದ ಬಂಗಾರ ಮತ್ತು ಹಣವನ್ನು ಕೈಗೆ ಸಿಕ್ಕಷ್ಟು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಗೆ ಇಂದು 75ನೇ ಹುಟ್ಟುಹಬ್ಬದ ಸಂಭ್ರಮ.. ಗಣ್ಯಾತಿಗಣ್ಯರಿಂದ ಶುಭಾಶಯಗಳ ಸುರಿಮಳೆ!







