ಬರಹಗಾರ, ಸಂಗೀತಗಾರ ಹಾಗೂ ನಟ ಆದಿತ್ಯ ವಿನೋದ್ ಅವರು ಬರೆದ ಪುಸ್ತಕ ಈಗ ಸಿನಿಮಾ ರೂಪ ತಾಳುತ್ತಿದೆ. ಕಡಲ ತೀರ ಭಾರ್ಗವ ಸಿನಿಮಾ ನಿರ್ದೇಶಿಸಿದ್ದ ಪನ್ನಗ ಸೋಮಶೇಖರ್ ಕಾದಂಬರಿ ಆಧಾರಿತವಾದ ಕೆಂದಾವರೆ ಪುಸ್ತಕಕ್ಕೆ ಸಿನಿಮಾ ಟಚ್ ಕೊಡಲಿದ್ದಾರೆ.

ಇತ್ತೀಚೆಗೆ ಕೆಂದಾವರೆ ಪುಸ್ತಕವನ್ನು ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅನಾವರಣ ಮಾಡಿದರು. ನಿರುತ ಪಬ್ಲಿಕೇಷನ್ ಪುಸ್ತಕ ಪ್ರಕಟಿಸಿದೆ. ಆದಿತ್ಯ ವಿನೋದ್ ಅವರು ಬರೆದ ಈ ಪುಸ್ತಕ ಮಕ್ಕಳ ಕಳ್ಳತನದ ಸುತ್ತ ಸಾಗುವ ಕಥೆಯನ್ನು ಒಳಗೊಂಡಿದೆ.

ಕೆಂದಾವರೆ ಪುಸ್ತಕದ ಟೈಟಲ್ನ್ನೇ ಸಿನಿಮಾಗೆ ಇಡಲಾಗಿದೆ. ಪನ್ನಗ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಆದಿತ್ಯ ವಿನೋದ್ ನಟಿಸುತ್ತಿದ್ದು, ನಾಯಕಿಯಾಗಿ ದಿಯಾ ಸಾಥ್ ಕೊಡುತ್ತಿದ್ದಾರೆ. ಉಳಿದಂತೆ ಅಕ್ಷತಾ ಶ್ರೀಧರ್ ಶಾಸ್ತ್ರೀ, ಪ್ರಕಾಶ್ ತುಮ್ಮಿನಾಡು, ಶ್ರವಣ್ ಜಗದೀಶ್, ಪುನೀತ್ ಓಂಕಾರ್, ವಿಶ್ವಾಸ್ ಕೃಷ್ಣ ತಾರಾಬಳಗದಲ್ಲಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ ಆದಿತ್ಯ ವಿನೋದ್ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದು, ಅರುಣ್ ಕುಮಾರ್ ಕ್ಯಾಮೆರಾ ಹಿಡಿಯಲಿದ್ದಾರೆ. ಈಗಾಗಲೇ 50%ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ. ಹುಬ್ಬಳ್ಳಿ, ಧಾರವಾಡ, ಸವದತ್ತಿ, ಸಾಗರ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಕೆಂದಾವರೆ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ. ಅಪ್ರಮೇಯ ಪ್ರೊಡಕ್ಷನ್ ಬ್ಯಾನರ್ನಡಿ ಈ ಚಿತ್ರ ತಯಾರಾಗುತ್ತಿದೆ.

ಇದನ್ನೂ ಓದಿ : ‘ಲವ್ ಯು ಮುದ್ದು’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ – ಬಿಂದಾಸ್ ಆಗಿ ಕುಣಿದ ಸಿದ್ದು-ರೇಷ್ಮಾ!







