ದಸರಾ ಉದ್ಘಾಟನೆ ವಿವಾದ.. ಬಾನು ಮುಷ್ತಾಕ್ ಆಹ್ವಾನ ಪ್ರಶ್ನಿಸಿ ಸಲ್ಲಿಸಿದ್ದ 3 ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್!

ಬೆಂಗಳೂರು/ಮೈಸೂರು : ನಾಡಹಬ್ಬ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್‌ ಆಯ್ಕೆ ವಿರೋಧಿಸಿ ಸಲ್ಲಿಸಿದ್ದ ಮೂರು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಮೂರು ಜನ ಅರ್ಜಿದಾರರಿಗೆ ಭಾರೀ ಹಿನ್ನೆಡೆಯಾಗಿದೆ.

ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್‌ ಆಯ್ಕೆ ವಿರೋಧಿಸಿ, ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ, ಗಿರೀಶ್ ಕುಮಾರ್ ಮತ್ತು ಗೌರವ್‌ ಎಂಬವರಿಂದ ಪಿಐಎಲ್ ಸಲ್ಲಿಕೆಯಾಗಿತ್ತು. ಇಂದು ಹೈಕೋರ್ಟ್ ಮುಖ್ಯ ನ್ಯಾ. ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ವಿಸ್ತ್ರತ ಆದೇಶ ಪ್ರಕಟಿಸೋದಾಗಿ ತಿಳಿಸಿದ ಹೈಕೋರ್ಟ್, ಮುಷ್ತಾಕ್ ಆಹ್ವಾನ ಪ್ರಶ್ನಿಸಿ ಸಲ್ಲಿಸಿದ್ದ ಮೂರು ಅರ್ಜಿಗಳನ್ನೂ ವಜಾ ಮಾಡಿ ಆದೇಶಿಸಿದೆ.

ಮೈಸೂರು ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು, ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಭಾನು ಮುಷ್ತಾಕ್ ಅವರ ಆಯ್ಕೆ ಮಾಡಿದ್ದು ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ್ ರಿಗೆ ನೀಡಿದ ಆಹ್ವಾನ ಹಿಂಪಡೆಯಲು ನಿರ್ದೇಶನ ನೀಡಬೇಕು ಅನ್ನೋದು ಅರ್ಜಿದಾರರ ಮನವಿ ಆಗಿತ್ತು. ದಸರಾ ಹಿಂದೂ ಧಾರ್ಮಿಕ ಸಂಪ್ರದಾಯ ಅವಿಭಾಜ್ಯ ಭಾಗವಾಗಿದ್ದು, ಹಿಂದೂ ಆಗಮಿಕ ಪದ್ದತಿ ಪ್ರಕಾರ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನಡೆಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ : ಯುವತಿಗೆ ಬ್ಯಾಡ್ ಟಚ್ – ಮಂಜನನ್ನು ಅರೆಸ್ಟ್ ಮಾಡಿದ ಪೊಲೀಸರು!

Btv Kannada
Author: Btv Kannada

Read More