ಕನ್ನಡ ಚಿತ್ರರಂಗ ಕಂಡ ಮೇರು ನಟಿ ಲೀಲಾವತಿಯವರಿಗೂ ‘ಕರ್ನಾಟಕ ರತ್ನ’ ನೀಡಿ – ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು!

ಕನ್ನಡ ಚಿತ್ರರಂಗ ಕಂಡ ಮೇರು ನಟಿ, ಕಲಾ ಸರಸ್ವತಿಯ ಸೇವೆಯಲ್ಲಿ ಬದುಕು ಮುಗಿಸಿದ ಲೀಲಾವತಿ ಅವರ ಸಾಧನೆಯನ್ನ ಪರಿಗಣಿಸಿ ಕರ್ನಾಟಕ ರತ್ನ ನೀಡಬೇಕೆಂಬ ಕೂಗು ಎದ್ದಿದೆ. ಹೌದು.. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್, ಪುನೀತ್ ರಾಜ್​ಕುಮಾರ್ ನಂತರ ಇತ್ತೀಚೆಗೆ ಡಾ. ವಿಷ್ಣುವರ್ಧನ್ ಹಾಗೂ ನಟಿ ಸರೋಜಾದೇವಿ ಅವರಿಗೆ ಕರ್ನಾಟಕ ರತ್ನವನ್ನ ರಾಜ್ಯ ಸರ್ಕಾರ ನೀಡಿದ್ದು, ಲೀಲಾವತಿ ಅವರಿಗೂ ಮರಣೋತ್ತರ ‘ಕರ್ನಾಟಕ’ ರತ್ನ ಗೌರವ ಸಿಗಬೇಕು ಎಂಬ ಬೇಡಿಕೆ ಶುರುವಾಗಿದೆ.

ಕನ್ನಡದ ಹಿರಿಯ ನಟಿ ಲೀಲಾವತಿಗೇಕ್ಕಿಲ್ಲ ಕರ್ನಾಟಕ ರತ್ನ ಪ್ರಶಸ್ತಿ? ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಕೊಡುಗೆ ಏನು ಇಲ್ವಾ? ಬಡವರಿಗಾಗಿ ಆಸ್ಪತ್ರೆ, ಗ್ರಾಮಕ್ಕೆ ರಸ್ತೆ, ಪಶುಗಳಿಗೆ ಆಸ್ಪತ್ರೆ ಕಟ್ಟಿಸಿ ಅಷ್ಟೆಲ್ಲ ಸಾಧನೆ ಮಾಡಿದ್ದಾರೆ. ಲೀಲಾವತಿ ಅವರಿಗೆ ಕರ್ನಾಟಕ ರತ್ನ ಕೊಡದೆ ವಂಚಿಸಲಾಗಿದೆ, ಶೀಘ್ರ ಕರ್ನಾಟಕ ರತ್ನ ಘೋಷಿಸುವಂತೆ ಅಭಿಮಾನಿಗಳು  ಸರ್ಕಾರಕ್ಕೆ ಮನವಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಅಭಿಮಾನಿಗಳ ಈ ಬೇಡಿಕೆಗೆ ಯಾವಾಗ ಫಲ ಸಿಗಲಿದೆ ಕಾದು ನೋಡಬೇಕು.

ಸರಿ ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟಿ ಲೀಲಾವತಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. 600ಕ್ಕೂ ಅಧಿಕಾ ಸಿನಿಮಾಗಳಲ್ಲಿ ಮಿಂಚಿದ್ದಾರೆ. ‘ಕಾಲೇಜ್ ಹೀರೋ’, ‘ಕನ್ನಡದ ಕಂದ’, ‘ಶುಕ್ರ’, ‘ಯಾರದು’ ಚಿತ್ರಗಳಲ್ಲಿ ಬಂಡವಾಳ ಹಾಕುವ ಮೂಲಕ ಲೀಲಾವತಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಹೀಗೆ ಸಾಧನೆಯ ಮೇರು ಶಿಖರ ಏರಿ 5 ದಶಕಗಳ ಚಿತ್ರರಂಗದಲ್ಲಿ ಮಿಂಚಿ ಮೆರೆದ ನಟಿಗೆ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಕೊಡಬೇಕು ಎಂಬ ಕೂಗು ಎದ್ದಿದೆ.

ಇದನ್ನೂ ಓದಿ : ಇಂದು ಸೇನೆಗೆ ತೆರಳಬೇಕಿದ್ದ ಯೋಧ ಹೃದಯಾಘಾತಕ್ಕೆ ಬಲಿ! 

Btv Kannada
Author: Btv Kannada

Read More