ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆಯು ನಗರದ ಕೇಂದ್ರ ಬಿಂದುವಾಗಿದ್ದು, ರಸ್ತೆಗಳು ಸುಸ್ತಿತಿಯಲ್ಲಿಡುವುದರ ಜೊತೆಗೆ ಪಾದಚಾರಿ ಮಾರ್ಗಗಳು ಸ್ವಚ್ಛವಾಗಿಡುವುದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮೊದಲನೇ ಆದ್ಯತೆಯಾಗಿದೆ. ನಗರದ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಕಸದ ರಾಶಿಗಳಿವೆ. ಹಾಗಾಗಿ ಎಲ್ಲಾ ವಾಣಿಜ್ಯ ಉದ್ದಿಮೆಗಳ ಮಾಲಿಕರು ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಕೇಂದ್ರ ನಗರ ಪಾಲಿಕೆ ಆಯುಕ್ತರ ಪಿ. ರಾಜೇಂದ್ರ ಚೋಳನ್ ಸೂಚನೆ ನೀಡಿದ್ದಾರೆ.

ಪ್ರಸ್ತುತ ಗ್ರೇಟರ್ ಬೆಂಗಳೂರು ಪ್ರದೇಶವೆಂದು ಹೊಸದಾಗಿ 5 ನಗರ ಪಾಲಿಕೆಗಳನ್ನು ಸೃಷ್ಟಿಸಲಾಗಿದೆ. ಸ್ಥಳೀಯವಾಗಿ ಪರಿಣಾಮಕಾರಿ ಕೆಲಸ-ಕಾರ್ಯಗಳು ಮಾಡುವ ನಿಟ್ಟಿನಲ್ಲಿ ಪೂರ್ಣ ಅಧಿಕಾರವನ್ನು ನೀಡಿ ಆಯುಕ್ತರನ್ನು ನೇಮಿಸಲಾಗಿದೆ. ಆಯುಕ್ತರು ನಿರಂತರವಾಗಿ ಬೆಳಗಿನ ಜಾವ ವಿವಿಧ ಅಧಿಕಾರಿಗಳೊಂದಿಗೆ ಕೇಂದ್ರ ನಗರ ಪಾಲಿಕೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪಾದಚಾರಿ ಮಾರ್ಗಗಳಲ್ಲಿ ಮಳಿಗೆಗಳ ಮುಂದೆ ಕಸ ಸುರಿದಿರುವುದು, ಹಾಗೂ ರಸ್ತೆ ಬದಿ ನೆಟ್ಟಿರುವ ಸಸಿಗಳು ಹಾಳಾಗಿರುವುದರ ಜೊತೆಗೆ ಕೆಟ್ಟ ಪರಿಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ತಾಜ್ಯ ಇರುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿರುತ್ತದೆ.

ಹಾಗಾಗಿ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಕೊಳ್ಳಲು ಮತ್ತು ಮಳಿಗೆಗಳ ಮುಂಬಾಗ ಕನಿಷ್ಠ 100 ಮೀ. ಉದ್ದದ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಕಸ ಸುರಿಯದಂತೆ ನಿಗಾವಹಿಸಿ ಸುಂದರವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಕೇಂದ್ರ ನಗರ ಪಾಲಿಕೆ ವತಿಯಿಂದ ಅಗತ್ಯ ಸಹಕಾರ ಕೂಡಾ ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ವಾಣಿಜ್ಯ ಉದ್ದಿಮೆಗಳು ವಿನೂತನ ಕಾರ್ಯಕ್ಕೆ ಕೇಂದ್ರ ನಗರ ಪಾಲಿಕೆಯ ಜೊತೆ ಕೈಜೋಡಿಸಿ ನಗರವನ್ನು ಮತ್ತಷ್ಟು ಆಕರ್ಷಕವಾಗಿ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡಲು ಸಹಕರಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಮನವಿ ಮಾಡಿದೆ.
ಇದನ್ನೂ ಓದಿ : ಬೆಂಗಳೂರು : ಮನೆಯ 2ನೇ ಮಹಡಿಯಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಸಾವು!







