ಬೀದರ್ ಪಶುವೈದ್ಯಕೀಯ ವಿವಿ ಭ್ರಷ್ಟಾಚಾರ ಪ್ರಕರಣ – ಬೆಂಗಳೂರು ಸೇರಿ ರಾಜ್ಯದ 69 ಕಡೆ ಏಕಕಾಲದಲ್ಲಿ ಲೋಕಾಯುಕ್ತ ರೇಡ್​!

ಬೆಂಗಳೂರು : ಬೀದರ್​ ಪಶುವೈದ್ಯಕೀಯ ಮೀನುಗಾರಿಕೆ ವಿಜ್ಞಾನಿಗಳ ವಿವಿಯಲ್ಲಿ ಬರೋಬ್ಬರಿ 32 ಕೋಟಿ ರೂ.ನಷ್ಟು ಹಗರಣ ನಡೆದಿದೆ ಎನ್ನಲಾದ ಆರೋಪ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ಕರ್ನಾಟಕದ 69 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ವಿವಿಯ ಅಧಿಕಾರಿಗಳು, ಸಿಬ್ಬಂದಿ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆದಿದೆ. ಭ್ರಷ್ಟಾಚಾರ ಆರೋಪ ಸಂಬಂಧ ಬೀದರ್ ಲೋಕಾಯುಕ್ತ ಕಚೇರಿಯಲ್ಲಿ ಬೆಂಗಳೂರು ಮೂಲದ ವೆಂಕಟ್ ರೆಡ್ಡಿ, ಶಂಕರೇಗೌಡ ಎಂಬುವರು ದೂರು ನೀಡಿದ್ದರು. ದೂರಿನನ್ವಯ 55 ಆರೋಪಿತರ ಮನೆ ಹಾಗೂ ಕಚೇರಿಯ ಮೇಲೆ ಲೋಕಾ ದಾಳಿ ಮಾಡಿದ್ದು, 46 ಎಂಟರ್​ಪ್ರೈಸಸ್​ಗಳು ಕ.ಪ.ಪ.ಮೀ.ವಿವಿಗೆ ಸಾಮಾಗ್ರಿ ಸರಬರಾಜು ಮಾಡದೇ ಹಣ ಪಡೆದಿರುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳಾದ ಕೆ.ಎಲ್ ಸುರೇಶ್ ಹಾಗೂ ಇತರ ನೌಕರರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಎಲ್ಲೆಲ್ಲಿ ಲೋಕಾಯುಕ್ತ ದಾಳಿ? ಬೀದರ್ ಜಿಲ್ಲೆಯ 28 ಕಡೆ, ಬೆಂಗಳೂರಿನ 28 ಕಡೆ, ಕೊಪ್ಪಳ 2 ಕಡೆ, ಚಿಕ್ಕಮಗಳೂರು ಜಿಲ್ಲೆಯ 2 ಕಡೆ, ಹಾಸನ, ರಾಮನಗರ, ಕೋಲಾರ, ಉಡುಪಿ ಸೇರಿದಂತೆ ರಾಜ್ಯಾದ್ಯಂತ 69 ಕಡೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು & ಸಿಬ್ಬಂದಿಗಳು ಎಂಟರ್ಪ್ರೈಸ್ ಜೊತೆ ಶಾಮೀಲಾಗಿ ಪೀಠೋಪಕರಣ, ಸ್ಟೇಷನರಿ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ‘ದಿಂಸೋಲ್’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್!

Btv Kannada
Author: Btv Kannada

Read More