ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರನೇ ಶಾಸಕ ಅರೆಸ್ಟ್​ – ವಿರೇಂದ್ರ ಪಪ್ಪಿ, ವಿನಯ್ ಕುಲಕರ್ಣಿ ಬೆನ್ನಲ್ಲೇ MLA ಸತೀಶ್​ ಸೈಲ್​ ಬಂಧನ​!

ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆ ಸಂಬಂಧ ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ ಬಂಧಿಸಿದೆ.

ಪ್ರಕರಣ ಸಂಬಂಧ ವಿಚಾರಣೆ ಸಲುವಾಗಿನಿನ್ನೆ ಶಾಂತಿನಗರದ ಕಚೇರಿಗೆ ಕಾರವಾರ ಶಾಸಕ ಸತೀಶ್‌ ಸೈಲ್‌ ಆಗಮಿಸಿದ್ದರು. ಈ ವೇಳೆ ತನಿಖೆಗೆ ಸಹಕರಿಸದ ಕಾರಣ ಶಾಸಕ ಸೈಲ್‌ರನ್ನು ED ಅಧಿಕಾರಿಗಳು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ.

2010ರಲ್ಲಿ ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 200 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟವುಂಟು ಮಾಡಿದ ಕೃತ್ಯದಲ್ಲಿ ಹಣ ಅಕ್ರಮ ವರ್ಗಾವಣೆಯೂ ನಡೆದಿತ್ತು. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ED ಅಧಿಕಾರಿಗಳು ಆ.13 ಹಾಗೂ ಆ.14ರಂದು ಶಾಸಕ ಸತೀಶ್‌ ಸೈಲ್‌ ಅವರ ಮನೆ, ಮುಂಬೈ, ದಿಲ್ಲಿ ಹಾಗೂ ಗೋವಾ ಸೇರಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ದಾಳಿ ವೇಳೆ ಸೈಲ್‌ ಮನೆಯಲ್ಲಿ 1.41 ಕೋಟಿ ರೂ. ನಗದು, ಮೆ. ಶ್ರೀಲಾಲ್‌ ಮಹಲ್‌ ಕಂಪನಿಯಲ್ಲಿ 27 ಲಕ್ಷ ರೂ. ನಗದು, 6.75 ಕೆ.ಜಿ. ಚಿನ್ನಾಭರಣ ಜಪ್ತಿಯಾಗಿತ್ತು. ಜತೆಗೆ, ಸೈಲ್‌ ಹಾಗೂ ಕುಟುಂಬಸ್ಥರ ಬ್ಯಾಂಕ್‌ ಖಾತೆಗಳು, ಲಾಕರ್‌ಗಳಲ್ಲಿದ್ದ ಮೊತ್ತವೂ ಸೇರಿ ಒಟ್ಟು 14.13 ಕೋಟಿ ರೂ.ಗಳನ್ನು ED ಜಪ್ತಿ ಮಾಡಿತ್ತು.

ಅಷ್ಟೇ ಅಲ್ಲದೆ, 2010ರ ಏಪ್ರಿಲ್‌ 19 ಹಾಗೂ 2010ರ ಜೂನ್‌ 10ರ ಅವಧಿಯಲ್ಲಿ ಸತೀಶ್‌ ಸೈಲ್‌ ಅವರ ಕಂಪನಿಯು ಅದಿರು ಸಾಗಾಟ ವ್ಯವಹಾರದಲ್ಲಿ 86.78 ಕೋಟಿ ರೂ. ವಹಿವಾಟು ನಡೆಸಿರುವುದು ED ತನಿಖೆಯಲ್ಲಿ ಬಯಲಾಗಿತ್ತು. ಈ ನಿಟ್ಟಿನಲ್ಲಿ ಸತೀಶ್‌ ಸೈಲ್‌ ಹಾಗೂ ಇತರರ ವಿರುದ್ಧದ ED ತನಿಖೆ ಚುರುಕುಗೊಳಿಸಿದ್ದು, ಇದೀಗ ತನಿಖೆಗೆ ಸರಿಯಾಗಿ ಸಹಕರಿಸದ ಕಾರಣ ಸತೀಶ್‌ ಸೈಲ್‌ ಅವರನ್ನು ಬಂಧಿಸಲಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರನೇ ಶಾಸಕ ಅರೆಸ್ಟ್ : ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ, ವಿನಯ್ ಕುಲಕರ್ಣಿ ಬಂಧನದ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ ಮತ್ತೋರ್ವ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಸತೀಶ್ ಸೈಲ್ ಇಡಿಯಿಂದ ಬಂಧನಕ್ಕೊಳಗಾದ ಕರ್ನಾಟಕ ಕಾಂಗ್ರೆಸ್​ನ ಮೂರನೇ ಶಾಸಕರಗಿದ್ದಾರೆ.

ಇದನ್ನೂ ಓದಿ : ಶೀಘ್ರದಲ್ಲೇ ಮೂರು ಸಾವಿರ ಲೈನ್‌ಮನ್ ನೇಮಕಾತಿ ಪ್ರಕ್ರಿಯೆ ಪೂರ್ಣ – ಇಂಧನ ಸಚಿವ ಕೆ.ಜೆ.ಜಾರ್ಜ್!

Btv Kannada
Author: Btv Kannada

Read More