ಮಹೇಶ್ ನಿರ್ದೇಶನದ ಚಿತ್ರಕ್ಕೆ ಚಿಕ್ಕಣ್ಣ ಹೀರೋ – ಅಕ್ಟೋಬರ್​ನಲ್ಲಿ ಸಿನಿಮಾಗೆ ಮುಹೂರ್ತ!

ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪೈಕಿ ‘ಉಪಾಧ್ಯಕ್ಷ’ ಕೂಡ ಒಂದು. ಚಿಕ್ಕಣ್ಣ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಅದಾದ ಬಳಿಕ ಸಖತ್ ಚ್ಯೂಸಿಯಾಗಿರುವ ಚಿಕ್ಕಣ್ಣ, ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಕೇಳಿ ಕೆಲವೊಂದನ್ನು ಮಾತ್ರ ಫೈನಲ್ ಮಾಡುತ್ತಿದ್ದಾರೆ.

ಸದ್ಯ ಲಕ್ಷ್ಮಿ ಪುತ್ರ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಚಿಕ್ಕಣ್ಣ, ಅದಾದ ಬಳಿಕ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ಅವರು, ವಿಭಿನ್ನ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇಸಿ ಸೊಗಡಿನ ಈ ಸಿನಿಮಾಕ್ಕೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಯೋಗ್ಯ ಹಾಗೂ ಮದಗಜ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರುವ ಮಹೇಶ್, ಸದ್ಯ ಅಯೋಗ್ಯ 2 ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಇದೀಗ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾಕ್ಕೆ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮಹೇಶ್ ಕುಮಾರ್ ನಿರ್ದೇಶನದ ನಾಲ್ಕನೇ ಸಿನಿಮಾ.

ವಿನೋದ್ ಪ್ರಭಾಕರ್ ನಟನೆಯ ಫೈಟರ್ ಚಿತ್ರವನ್ನು ನಿರ್ಮಿಸಿದ್ದ ಸೋಮಶೇಖರ್ ಕಟ್ಟಿಗೇನಹಳ್ಳಿ ಅವರ ನಿರ್ಮಾಣದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಚಿತ್ರದ ಮುಹೂರ್ತ ಅಕ್ಟೋಬರ್​ನಲ್ಲಿ ನೆರವೇರಲಿದ್ದು, ಅದೇ ದಿನ ಶೀರ್ಷಿಕೆ ಸಹ ಅನಾವರಣಗೊಳ್ಳಲಿದೆ.

ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಸೋಮಶೇಖರ್ ಕಟ್ಟಿಗೇನಹಳ್ಳಿ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ವಿ.ಹರಿಕೃಷ್ಣ ಸಂಗೀತ, ಸುಧಾಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಾಸ್ತಿ, ರಘು ನಿಡುವಳ್ಳಿ ಹಾಗೂ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ ಈ ಚಿತ್ರಕ್ಕಿದ್ದು, ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ.

ಇದನ್ನೂ ಓದಿ : ನಟ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲೇ ಗತಿ – ‘ದಾಸ’ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್​ ನಕಾರ!

Btv Kannada
Author: Btv Kannada

Read More