ನವದೆಹಲಿ : ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್(NCAER)ನ ಮಹಾನಿರ್ದೇಶಕಿ, ಆರ್ಥಿಕ ತಜ್ಞೆ ಹಾಗೂ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯೆ ಪೂನಮ್ ಗುಪ್ತಾ ಅವರು ಮೂರು ವರ್ಷಗಳ ಅವಧಿಗೆ ಆರ್ಬಿಐನ ಡೆಪ್ಯೂಟಿ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
NCAERಗೆ ಸೇರುವ ಮೊದಲು, ಗುಪ್ತಾ ಅವರು ಅಂತರರಾಷ್ಟ್ರೀಯ ಹಣಕಾಸು ನಿಗಮದಲ್ಲಿ ಜಾಗತಿಕ ಮ್ಯಾಕ್ರೋ ಮತ್ತು ಮಾರುಕಟ್ಟೆ ಸಂಶೋಧನೆಯ ಪ್ರಮುಖ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಈ ಹಿಂದೆ ಭಾರತೀಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿಯಲ್ಲಿ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMF) ಸಂಶೋಧಕರೂ ಆಗಿದ್ದರು.
ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಪಿಎಚ್ಡಿಯಲ್ಲಿ 1998ರ ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಪೂನಮ್, 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸದಸ್ಯರೂ ಹೌದು. ಇದೀಗ ಇತ್ತೀಚಿಗೆ ಆರ್ಬಿಐನ ಡೆಪ್ಯೂಟಿ ಗವರ್ನರ್ ಹುದ್ದೆಯಿಂದ ನಿವೃತ್ತಿ ಹೊಂದಿದ ಎಂ.ಬಿ.ಪಾತ್ರಾ ಅವರ ಹುದ್ದೆಯನ್ನು ಪೂನಮ್ ಗುಪ್ತಾ ಅಲಕಂರಿಸಲಿದ್ದಾರೆ.
ಇದನ್ನೂ ಓದಿ : ಶಾಸಕ ರಾಜು ಕಾಗೆ ಸಹೋದರನ ಪುತ್ರನಿಂದ ಕಾರು ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು!
