ಮದ್ದೂರು ಗಣೇಶೋತ್ಸವದಲ್ಲಿ ಕಲ್ಲು ತೂರಾಟ – ‘ಕೈ’ ಸರ್ಕಾರದ ವಿರುದ್ಧ ಮಾಜಿ ಸಚಿವ ಡಿಸಿ ತಮ್ಮಣ್ಣ ಆಕ್ರೋಶ!

ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕಲ್ಲುತೂರಾಟ ನಡೆದಿರುವ ಘಟನೆಯಲ್ಲಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನಾ ಸಂಬಂಧ 20ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಸ್ಥಳೀಯ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ತೀವ್ರ ಬಿಗುವಿನ ವಾತಾವರಣವನ್ನು ಸೃಷ್ಟಿಸಿದೆ. ಸದ್ಯ ಪೊಲೀಸರು ಮದ್ದೂರಿನಲ್ಲಿ ಕಟ್ಟೆಚ್ಚರದ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದೀಗ ಈ ಘಟನೆಯ ಬಗ್ಗೆ ಜೆಡಿಎಸ್​ ನಾಯಕ, ಮಾಜಿ ಸಚಿವ ಡಿಸಿ ತಮ್ಮಣ್ಣ ಅವರು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಮದ್ದೂರು ಪಟ್ಟಣದಲ್ಲಿ ನಿನ್ನೆ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಕಿಡಿಗೇಡಿಗಳು ಮೆರವಣಿಗೆ ವೇಳೆ ನಿರಂತರ ಕಲ್ಲು ತೂರಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ್ದಾರೆ, ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ತೀವ್ರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದ್ದು ಜೆಡಿಎಸ್​ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಹಾಗೂ ಮೆರವಣಿಗೆಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಗಣೇಶ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಂತೂ ಮತಾಂಧ ಪುಂಡರು ಗುಂಪು ಕಟ್ಟಿಕೊಂಡು ಕಲ್ಲು ತೂರುವ ಘಟನೆ ನಮ್ಮ ಮದ್ದೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವರದಿಯಾಗುತ್ತಿದೆ.

ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ.
ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ.. ಮದ್ದೂರು ಉದ್ವಿಗ್ನ – ನಾಳೆ ಬೆಳಗ್ಗೆಯವರೆಗೆ ನಿಷೇಧಾಜ್ಞೆ ಜಾರಿ!

Btv Kannada
Author: Btv Kannada

Read More