ಮಂಡ್ಯ : ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆವರೆಗೆ ಮದ್ದೂರು ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಘಟನಾ ನಡೆದ ಸ್ಥಳಕ್ಕೆ ರಾತ್ರಿಯೇ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ. ತಿಮ್ಮಯ್ಯ, ಎಸ್.ಈ. ಗಂಗಾಧರಸ್ವಾಮಿ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ 1 ಕೆಎಸ್‌ಆರ್‌ಪಿ, ಡಿಎಆರ್ ತಂಡವನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಂಗಳವಾರ ಬೆಳಗ್ಗೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಮಿಳು ಕಾಲೋನಿಯ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲು ಮೆರವಣಿಗೆ ಮಾಡಿದ್ದಾರೆ. ರಾಮ್ ರಹೀಮ್ ನಗರದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ. ನಂತರ ಎರಡೂ ಕಡೆಯಿಂದ ಕಲ್ಲು ತೂರಾಟ ಆಗಿದೆ. ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಹೇಳಿದ್ದಾರೆ.

ಇನ್ನೂ ಘಟನಾ ಸಂಬಂಧ ಒಂದು ಸ್ವಯಂಪ್ರೇರಿತ, ಇನ್ನೊಂದು ಅಜಯ್ ಎಂಬ ಗಾಯಾಳು ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದೇವೆ. 21 ಜನರನ್ನು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದವರ ಪೈಕಿ ಇಬ್ಬರು ಮಾತ್ರ ಚನ್ನಪಟ್ಟಣದವರು, ಉಳಿದವರು ಸ್ಥಳೀಯರಾಗಿದ್ದಾರೆ. ಸದ್ಯ ಬಿಗಿ ಭದ್ರತೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇಬ್ಬರು ಪೊಲೀಸ್ ಸಿಬ್ಬಂದಿಗೆ ಸಹ ಏಟು ಬಿದ್ದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದ ಕಾರಣ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ವಿವರಿಸಿದ್ದಾರೆ. ಇನ್ನೂ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪೇಟೆಯ ರಸ್ತೆಗಳಲ್ಲಿನ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಸದ್ಯ ಮದ್ದೂರಿನಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ನಾಳೆ ಬೆಳಗ್ಗೆವರೆಗೆ ಮುಂದುವರಿಯಲಿದೆ.
ಇದನ್ನೂ ಓದಿ : ಹೆತ್ತ ಮಗಳಿಂದಲೇ ವೃದ್ದ ತಂದೆಗೆ ನಂಬಿಕೆ ದ್ರೋಹ.. ಬ್ಯಾಂಕಿನ ಸಾಲ ಕ್ಲಿಯರೆನ್ಸ್ ಮಾಡಿಸ್ತೀನಿ ಎಂದು ಸಹಿ ಪಡೆದು ದೋಖಾ!







