ಪ್ರತಿಷ್ಠಿತ ಸಂಸ್ಥೆ ಲಹರಿ ಮ್ಯೂಸಿಕ್ 50 ವರುಷಗಳ ಕಾಲ ಕಲಾಸೇವೆಯನ್ನು ಸಲ್ಲಿಸಿ ಸುವರ್ಣ ಮಹೋತ್ಸವವನ್ನು ಆಚರಿಸುವ ಹೊಸ್ತಿಲಲ್ಲಿದೆ. ಕಲೆಗೆ ಯಾವುದೇ ಜಾತಿ ,ಧರ್ಮ, ಭಾಷೆಗಳ ಬೇಧವಿಲ್ಲದೆ , ಸಪ್ತ ಸ್ವರಗಳಿಗೆ ಎಲ್ಲರೂ ಸರಿಸಮರು ಎಂಬ ಅಚಲವಾದ ಸಿದ್ಧಾಂತವನ್ನು ಹೊಂದಿರುವ ಸಂಸ್ಥೆ ಲಹರಿ ಹಾಗೂ MRT Music ಸಂಸ್ಥೆ.
ಲಹರಿ ಸಂಸ್ಥೆ ಕಳೆದ 50 ವರುಷಗಳಿಂದ ನಾಡಿನ ಸಂಗೀತ, ಸಾಹಿತ್ಯ, ಸಂಸ್ಕೃತಿಯನ್ನು, ಸಿನಿಮಾಗಳನ್ನು ಪೋಷಿಸಿ, ದೇಶದ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ನೀಡಿರುವ ದಕ್ಷಿಣ ಭಾರತದ ಅತಿ ದೊಡ್ಡ ಹಾಗೂ ಪ್ರಮುಖ ಆಡಿಯೋ ಸಂಸ್ಥೆ. ಈ ಸುವರ್ಣ ಮಹೋತ್ಸವವನ್ನು ಆಚರಿಸಲು ಲಹರಿ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಯನ್ನು ರೂಪಿಸಿದೆ. ಅದುವೇ “ಲಹರಿ – MRT ಮ್ಯೂಸಿಕ್ – ಪ್ರಯೋಗ್ ಇಂಡಿಯನ್ ಕ್ಲಾಸಿಕಲ್ ಕಾನ್ಸರ್ಟ್”.
ಪ್ರಯೋಗ್ ಸ್ಟುಡಿಯೋ, Only ಕನ್ನಡ OTT ಸಹಯೋಗದೊಂದಿಗೆ ಮುಂದಿನ ಒಂದು ವರುಷದಲ್ಲಿ ಹತ್ತು ಸಾವಿರ 10,000 ಹಾಡುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಕಲಾರಸಿಕರಿಗೆ ಲಹರಿ ಮ್ಯೂಸಿಕ್, MRT ಮ್ಯೂಸಿಕ್ youtube ಚಾನೆಲ್ ಹಾಗೂ ಓನ್ಲಿ ಕನ್ನಡ OTT ವಾಹಿನಿ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ.
ಈ ಕಾರ್ಯಕ್ರಮದ ಮೂಲಕ ನಾಡಿನ ನಗರದ ಪ್ರದೇಶದಿಂದ ಹಿಡಿದು ಕಾಡಿನ ಮಧ್ಯದಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ, ಎಲ್ಲಾ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ದೇಶದ ಮೂಲೆ ಮೂಲೆಯಿಂದ ಆಯ್ಕೆಮಾಡಿ ಅವರ ಕಲೆಯನ್ನು ಅನಾವರಣಗೊಳಿಸುವ ಮಹತ್ತರ ವೇದಿಕೆಯನ್ನು ಸೃಷ್ಟಿ ಮಾಡಿದ್ದಾರೆ.
ದೇಶದ ಶ್ರೀಮಂತ ಕಲೆಗಳಾದ ಶಾಸ್ತ್ರೀಯ ಸಂಗೀತ, ಸಾಹಿತ್ಯ, ಭಾವಗೀತೆ, ಭಕ್ತಿ ಗೀತೆ, ಜನಪದ ಗೀತೆ, ಶಾಸ್ತ್ರೀಯ ನೃತ್ಯ, ಜನಪದ ನೃತ್ಯ, ಹರಿಕಥೆ, ಯಕ್ಷಗಾನ , ನಾಟಕ , ಕಿರುಚಿತ್ರಗಳು ಹಾಗೂ ಎಲ್ಲಾ ಪ್ರಕಾರದ ನಮ್ಮ ಭಾರತೀಯ ಸಂಸ್ಕೃತಿಯ ಕಲಾ ಪ್ರಕಾರಗಳನ್ನು ಸಂರಕ್ಷಿಸಿ, ಪೋಷಿಸಿ ಮುಂದಿನ ಪೀಳಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈಗಾಗಲೇ ಕಳೆದ ತಿಂಗಳು ಪ್ರಯೋಗ್ ಸ್ಟುಡಿಯೋ ಸಹಯೋಗದೊಂದಿಗೆ ಒಂದು ಸಾವಿರದ ಐನೂರಕ್ಕೂ ಹೆಚ್ಚು ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿಗೀತೆಯನ್ನು ರೆಕಾರ್ಡಿಂಗ್ ಮಾಡಿ ಸುಮಾರು ಇನ್ನೂರಕ್ಕೂ ಹೆಚ್ಚು ಹೊಸ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ವೇದಿಕೆಯನ್ನು ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ದೇಶದ ಹಿರಿಯ ಹಲವಾರು ಕಲಾವಿದರು ಈ ಯೋಜನೆ ಹಾಗೂ ಯೋಚನೆಗೆ ತಮ್ಮ ಸಹಯೋಗವನ್ನು ಸೂಚಿಸಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಮುಂದೆ ಬಂದಿದ್ದಾರೆ. ಈ ಮಹತ್ತರವಾದ ಕಾರ್ಯಕ್ರಮದಿಂದ ಹಲವಾರು ಕಲಾವಿದರು, ತಂತ್ರಜ್ಞರು, ಬರಹಗಾರರು, ಸಂಗೀತ ನಿರ್ದೇಶಕರು ಬೆಳಕಿಗೆ ಬರಲಿದ್ದಾರೆ ಎಂದು ಲಹರಿ ಮ್ಯೂಸಿಕ್ ಹಾಗೂ MRT ಮ್ಯೂಸಿಕ್ ಸಂಸ್ಥೆಯ ನಿರ್ದೇಶಕರಾದ ಲಹರಿ ವೇಲು ಅವರು ಹೇಳಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಷಡ್ಯಂತ್ರ ಕೇಸ್ – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ ಶಶಿಕಾಂತ್ ಸೆಂಥಿಲ್!







