ಯೂ ಟರ್ನ್-2, ಕರಿಮಣಿ ಮಾಲೀಕ ಸಿನಿಮಾ ಖ್ಯಾತಿಯ ನಿರ್ದೇಶಕ ಚಂದ್ರು ಓಬಯ್ಯ ಇದೀಗ ಸಾಮಾಜಿಕ ಕಳಕಳಿ ಇರುವ ರಾಮಾ ಅಂಡ್ ರಾಮು ಚಿತ್ರವನ್ನು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಪೌರಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆ ಹಾಗೂ ಸುದ್ದಿಗೋಷ್ಟಿ ಇತ್ತೀಚೆಗೆ ನಡೆಯಿತು. ಪೌರ ಕಾರ್ಮಿಕರ ದಿನ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು, ಈ ಹಂತದಲ್ಲಿ ನಾಗರಿಕರ ಪಾತ್ರದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ.

ಚಂದ್ರು ಓಬಯ್ಯ ಅವರು, ಈ ಚಿತ್ರವನ್ನು ವರ್ಷದ ಹಿಂದೆ ಆರಂಭಿಸಿದ್ದೆ. ಒಮ್ಮೆ ಫೇಸ್ ಬುಕ್ನಲ್ಲಿ ನೋಡಿದ ವಿಡಿಯೋ ಈ ಸಿನಿಮಾವಾಗಲು ಪ್ರೇರಣೆ. ನಮ್ಮ ಪರಿಸರ, ರಸ್ತೆಯನ್ನು ಸ್ವಚ್ಚಗೊಳಿಸುವ ಪೌರಕಾರ್ಮಿಕ ಮಹಿಳೆಯೊಬ್ಬಳು ಮನೆಯ ಮುಂದೆ ನಿಂತು ನೀರು ಕೇಳಿದಾಗ ಆ ಮನೆಯವರು ನಡೆದುಕೊಂಡ ರೀತಿ ಕಂಡು ನನ್ನ ಮನಸಿಗೆ ತುಂಬಾ ಬೇಸರವಾಯಿತು. ಅದೇ ಘಟನೆ ಇಟ್ಟುಕೊಂಡು ಒಂದು ಕಾದಂಬರಿ ಬರೆದೆ. ನಂತರ ಅದನ್ನೇ ಈ ಸಿನಿಮಾ ಮಾಡಿದ್ದೇನೆ. ನಮ್ಮ ಪರಿಸರವನ್ನು ಸ್ವಚ್ಚ ಮಾಡುವವರನ್ನು ನಾವೇ ಗೌರವಿಸದಿದ್ದರೆ ಹೇಗೆ ? ಒಂದು ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡಿದೆ. ಹುಟ್ಟಿದಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಮೆಸೇಜ್ ಕೊಡುವ ಈ ಚಿತ್ರ ನಿರ್ಮಿಸಿದ್ದೇನೆ. ಈಗಾಗಲೇ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು, ಸೆನ್ಸಾರ್ನಿಂದ ಯು/ಎ ಪ್ರಮಾಣಪತ್ರ ಪಡೆದಿದೆ. ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದರು.

ವೇದಿಕೆಯಲ್ಲಿ ಚಿತ್ರದ ನಾಯಕಿ ಬೆಳಗಾವಿ ಮೂಲದ ಸೌಮ್ಯ, ಪೊಲೀಸ್ ಪಾತ್ರ ಮಾಡಿರುವ ನಾಗೇಂದ್ರ ಅರಸ್, ನಟರಾದ ಮೂಗು ಸುರೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಸೇರಿದಂತೆ ಅನೇಕರು ಹಾಜರಿದ್ದರು.

ಇದನ್ನೂ ಓದಿ : ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವು!







