ಶಾಸಕ ವೀರೇಂದ್ರ ಪಪ್ಪಿಗೆ ED ಮತ್ತೊಂದು ಶಾಕ್ – ಅಕೌಂಟ್‌ಗಳಲ್ಲಿದ್ದ ಬರೋಬ್ಬರಿ 55 ಕೋಟಿ ರೂ. ನಗದು ಫ್ರೀಜ್!

ಬೆಂಗಳೂರು : ಅಕ್ರಮ ಬೆಟ್ಟಿಂಗ್‌ ಆರೋಪ ಸಂಬಂಧ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ED ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದೆ. ಮತ್ತೊಂದೆಡೆ ವಿರೇಂದ್ರಗೆ ಸಂಬಂಧಿಸಿದಂತೆ ಆಸ್ತಿಯನ್ನು ED ಅಧಿಕಾರಿಗಳು ಶೋಧ ನಡೆಸಿದ್ದು, ಸದ್ಯ ವೀರೇಂದ್ರಗೆ ಸೇರಿದ ಬ್ಯಾಂಕ್ ಅಕೌಂಟ್‌ಗಳಲ್ಲಿದ್ದ 55 ಕೋಟಿ ರೂಪಾಯಿಯನ್ನು ಫ್ರೀಜ್ ಮಾಡಿದೆ. ಒಟ್ಟು 9 ಬ್ಯಾಂಕ್ ಖಾತೆಗಳು, ಒಂದು ಡಿಮ್ಯಾಟ್ ಅಕೌಂಟ್ ಹಾಗೂ 262 ಮ್ಯೂಲ್ ಖಾತೆಗಳಲ್ಲಿದ್ದ ಅಂದಾಜು 55 ಕೋಟಿ ರೂ. ಜಪ್ತಿ ಮಾಡಿದೆ. ಅಲ್ಲದೇ 5 ದುಬಾರಿ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ.

ಈ ಬಗ್ಗೆ ED ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮಂಗಳವಾರ ಚಳ್ಳಕೆರೆ, ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ವೀರೆಂದ್ರಗೆ ಸೇರಿದ ಕೋಟ್ಯಂತರ ರೂ. ಹಣ ಹಾಗೂ ಐಷಾರಾಮಿ ಐದು ಕಾರುಗಳನ್ನ ಫ್ರೀಜ್ ಮಾಡಿದ್ದಾರೆ ಎಂದು ತಿಳಿಸಿದೆ. ಅಲ್ಲದೇ ಕೆ.ಸಿ. ವೀರೇಂದ್ರ ಅವರ 9 ಬ್ಯಾಂಕ್ ಖಾತೆಗಳಲ್ಲಿ ಅಂದಾಜು 40.69 ಕೋಟಿ ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. (ಅಂದಾಜು) ಸೇರಿದಂತೆ 55 ಕೋಟಿ ರೂ. ಹಣವನ್ನು ಇಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.

ಇನ್ನೂ, ವಿರೇಂದ್ರ ಪಪ್ಪಿಯ ಆನ್ಲೈನ್, ಆಫ್ ಲೈನ್ ಆಟಗಳು ಬಗೆದಷ್ಟು ಬಯಲಾಗುತ್ತಿದ್ದು, ಬರೀ ಬೆಟ್ಟಿಂಗ್ ನಿಂದಲೇ ಬರೋಬ್ಬರಿ 2000 ಸಾವಿರ ಕೋಟಿ ಸಂಪಾದನೆ ಮಾಡಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ವೀರೇಂದ್ರ ಪಪ್ಪಿ ಮತ್ತು ಸಹಚರರು ನಡೆಸುತ್ತಿದ್ದ ವೆಬ್ ಸೈಟ್​ನಿಂದ ಅಲ್ಪಾವಧಿಯಲ್ಲಿ 2000 ಸಾವಿರ ಕೋಟಿಯಷ್ಟು ಲಾಭ ಒಂದೇ ಗೇಟ್ ವೇ ಮೂಲಕ ಬಂದಿರೋದು ಪತ್ತೆಯಾಗಿದೆ.

ವೀರೇಂದ್ರ ಪಪ್ಪಿಯ ಸಹೋದರರಾದ ಕೆ.ಸಿ ತಿಪ್ಪೆಸ್ವಾಮಿ ಡೈಮೆಂಡ್ ಸಾಫ್ಟ್ ಟೆಕ್, ಟಿಆರ್.ಎಸ್ ಟೆಕ್ನಾಲಜೀಸ್ ಹಾಗು ಪ್ರೈಮ್ 9 ಟೆಕ್ನಾಲಜೀಸ್ ಎಂಬಾ ಮೂರು ಕಂಪನಿಗಳು ದುಬೈನಿಂದ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದ್ದು, ಈ ಕಂಪನಿಗಳಿಗೆ ವೀರೇಂದ್ರ ಪಪ್ಪಿ ಅವರ ಕಾಲ್‌ಸೆಂಟರ್ ಹಾಗೂ ಗೇಮಿಂಗ್ ವ್ಯವಹಾರದ ಬಗ್ಗೆ ನಂಟು ಇರೋದು ಗೊತ್ತಾಗಿದೆ.

ಇದನ್ನೂ ಓದಿ : ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ವೈಭವ.. ಚಿನ್ನದ ಅಂಬಾರಿ ಹೊತ್ತು ಸಾಗುವ ಅಭಿಮನ್ಯುಗೆ ಭಾರ ಹೊರುವ ತಾಲೀಮು ಆರಂಭ!

Btv Kannada
Author: Btv Kannada

Read More