AI ಬಳಸಿ ನನ್ನ ವಿರುದ್ಧ ಮಹಾ ಸಂಚು ರೂಪಿಸಲಾಗಿದೆ – ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್​​.ರವಿಕುಮಾರ್ ರಿಯಾಕ್ಷನ್​​!

ಬೆಂಗಳೂರು : ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಶೇ. 60ರಷ್ಟು ಕಮಿಷನ್‌ ವಸೂಲಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌‍. ರವಿಕುಮಾರ್‌ ಅವರನ್ನು ಕೂಡಲೇ ವಜಾಗೊಳಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಇದೀಗ ಈ ಬಗ್ಗೆ ಪ್ರತಿಕ್ರಿಸಿರುವ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಅವರು, ನಿಗಮದಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ತಂದ ಕಾರಣಕ್ಕೆ AI ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಮಹಾ ಸಂಚು ರೂಪಿಸಲಾಗಿದೆ. ಸಿಎಂ ಸೂಚನೆ ಕೊಟ್ಟರೆ ಶೀಘ್ರ ಬೆಂಗಳೂರಿಗೆ ತೆರಳಿ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾ‌ರ್ ತಿಳಿಸಿದ್ದಾರೆ.

ಪಕ್ಷಕ್ಕೆ ಮುಜುಗರ ಆಗುವುದನ್ನು ತಡೆಯಲು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೂಡಲು ನಿರ್ಧರಿಸಿದ್ದೇನೆ, ನಾನು ಯಾರ ಬಳಿಯೂ ಹಣ ಪಡೆದಿಲ್ಲ. ಯಾರಿಗೂ ಹಣ ಕೊಟ್ಟಿಲ್ಲ. ಕಮಿಷನ್ ವಿಚಾರವನ್ನು ಮಾತನಾಡಿಲ್ಲ. ಎಐ ಬಳಸಿ ವಿಡಿಯೋದಲ್ಲಿನ ಸಂಭಾಷಣೆ ತಿರುಚಲಾಗಿದೆ. ಎಫ್‌ಎಸ್​ಎಲ್ ಪರೀಕ್ಷೆಗೆ ಕಳುಹಿಸಿದರೆ ವಾಸ್ತವ ಸಂಗತಿ ಗೊತ್ತಾಗಲಿದೆ ಎಂದು ರವಿಕುಮಾರ್ ಹೇಳಿದ್ದಾರೆ.

ನಿಗಮದ ಕಚೇರಿಯಲ್ಲಿಯೇ ಆ ರೀತಿ ವಿಡಿಯೋ ಚಿತ್ರೀಕರಿಸಿ ತಿರುಚಲಾಗಿದೆ. ಅದರಲ್ಲಿ ನಿಗಮದ ಅಧಿಕಾರಿಗಳ ಪಾತ್ರವೂ ಇರಬಹುದು. ರಾಜಕೀಯ ವಿರೋಧಿಗಳ ಜೊತೆ ಕೈ ಜೋಡಿಸಿ ಈ ರೀತಿ ಷಡ್ಯಂತ್ರ ಹೆಣೆಯಲಾಗಿದೆ. ಈ ಬಗ್ಗೆ ಗುರುವಾರ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟು ಇಡೀ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಲಿದ್ದೇನೆ ಎಂದು ಹೇಳಿದ್ದಾರೆ.

ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿದ್ದರಿಂದ ಬೆಂಗಳೂರಿಗೆ ತೆರಳಿ ಸಿಎಂ ಭೇಟಿ ಮಾಡುವುದು ತಡವಾಗಿದೆ ಎಂದು ಹೇಳಿದ ರವಿಕುಮಾರ್, ಸಮುದಾಯ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೂ ಧಕ್ಕೆಯಾಗಿದೆ. ಹೀಗಾಗಿ ಸರ್ಕಾರ ಗಂಭೀರ ತನಿಖೆ ಮಾಡಲೇಬೇಕಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ದೊಡ್ಡ ಹಗರಣ ನಡೆದಿರುವುದರಿಂದ ನಾನು ಅದನ್ನು ಮುಳ್ಳಿನ ಕುರ್ಚಿ ಎಂದೇ ಭಾವಿಸಿದ್ದೆ. ಬಹಳಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿದ್ದೇನೆ. ನಿಗಮದಲ್ಲಿ ಭ್ರಷ್ಟಾಚಾರ ತಡೆಯಲು ಬಿಗಿ ಕ್ರಮ ಕೈಗೊಂಡಿದ್ದೆನು. ಅದನ್ನು ಸಹಿಸಲಾರದೇ ತಂತ್ರಜ್ಞಾನ ಬಳಸಿಕೊಂಡು ಈ ರೀತಿಯ ತಿರುಚಿದ ವಿಡಿಯೇ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸುಡಾನ್‌ನಲ್ಲಿ ಭಾರೀ ಭೂಕುಸಿತಕ್ಕೆ ಇಡೀ ಗ್ರಾಮವೇ ನೆಲಸಮಾಧಿ.. 1000ಕ್ಕೂ ಹೆಚ್ಚು ಜನ ಬಲಿ!

Btv Kannada
Author: Btv Kannada

Read More