ಮಂಡ್ಯ : ಇತ್ತೀಚಿಗೆ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದ್ದು, ಇದೀಗ ಅಬಕಾರಿ ಇಲಾಖೆ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ತಪಾಸಣೆ ನೆಪದಲ್ಲಿ ಸುಳ್ಳು ಪ್ರಕರಣ ದಾಖಲಿಸುತ್ತಾರೆ ಎಂದು ಪುನೀತ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ಸಂಬಂಧ ಮಂಡ್ಯ ಜಿಲ್ಲೆಯ ಮದ್ದೂರಿನ ಅಬಕಾರಿ ಇನ್ಸ್‌ಪೆಕ್ಟರ್ ರಂಗನಾಥ್ ವಿರುದ್ಧ ದೂರು ದಾಖಲಾಗಿದೆ.

ಎಸ್.ಐ.ಹಾಗಲಹಳ್ಳಿಯಲ್ಲಿ ಪುನೀತ್ CL-7 ಬಾರ್ ನಡೆಸುತ್ತಿದ್ದು, ತನ್ನ ತಾಯಿ ಲಕ್ಷ್ಮೀ ಹೆಸರಿನಲ್ಲಿ ಲೈಸೆನ್ಸ್ ಪಡೆದು ಬಾರ್ ಓಪನ್ ಮಾಡಿದ್ದಾರೆ. ನಿಯಮ ಬದ್ಧವಾಗಿ ಬಾರ್ ನಡೆಸುತ್ತಿದ್ದರೂ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆಂದು ಆಪಾದನೆ ಮಾಡಿದ್ದಾರೆ. ಕಳೆದ ಆಗಸ್ಟ್ 30ರಂದು ರಂಗನಾಥ್ ಸಿಬ್ಬಂದಿಯೊಂದಿಗೆ ಬಾರ್ಗೆ ದಿಢೀರ್ ಭೇಟಿ ನೀಡಿದ್ದು, ಈ ವೇಳೆ ಮೊದಲೇ ಸಿದ್ದಪಡಿಸಿ ತಂದಿದ್ದ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹಾಕಿದ್ದಾರೆ.

ನಮಗೆ ಟಾರ್ಗೆಟ್ ಇದೆ, ಮಂತ್ ಎಂಡ್ ಇರೋದ್ರಿಂದ ಕೇಸ್ ಹಾಕ್ತೀವಿ ಎಂದು ಅಧಿಕಾರಿ ರಂಗನಾಥ್ ಹೇಳಿದ್ದಾರೆ. ಸಹಿ ಹಾಕದಿದ್ದಾಗ ಸ್ಟಾಕ್ ತಪಾಸಣೆ ಮಾಡಿ ತಪ್ಪು ಲೆಕ್ಕ ಬರೆದಿದ್ದಾರೆ. ಎಲ್ಲವನ್ನೂ ನಿಯಮ ಬದ್ಧವಾಗಿ ಮಾಡೋದಕ್ಕೆ ಆಗಲ್ಲ, ಎಲ್ಲರಂತೆ ಅಡ್ಜೆಸ್ಟ್ ಮಾಡಿಕೊಂಡು ಹೋಗಬೇಕು. ಯಾವುದಾದ್ರೂ ಬೇರೆ ಹೋಟೆಲ್ ಹೆಸರಿನಲ್ಲಿ ಕೇಸ್ ಮಾಡ್ತೀವಿ, ಅದರ ದಂಡವನ್ನು ನೀವೇ ಕಟ್ಟಬೇಕು ಎಂದಿದ್ದಾರೆಂದು ದೂರಿನಲ್ಲಿ ಪುನೀತ್ ಉಲ್ಲೇಖಿಸಿದ್ದಾರೆ.

CCTV ದೃಶ್ಯ ಸಮೇತ ಪುನೀತ್ ದೂರು ನೀಡಿದ್ದು, ಈ ಹಿಂದೆ ಪುನೀತ್ CL7 ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಲೋಕಾಯುಕ್ತ ಮೆಟ್ಟಿಲೇರಿದ್ದರು. ಪುನೀತ್ ದೂರು ಆಧರಿಸಿ ಡಿಸಿ ರವಿಶಂಕರ್ನ್ನು ಸಸ್ಪೆಂಡ್ ಹಾಗೂ ಮತ್ತೋರ್ವ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಅದೇ ಕಾರಣಕ್ಕೆ ಪುನೀತ್ನನ್ನು ಪದೇ ಪದೇ ಟಾರ್ಗೆಟ್ ಮಾಡ್ತಿರುವ ಆರೋಪ ಕೇಳಿಬಂದಿದೆ.


ಇದನ್ನೂ ಓದಿ : “Congratulations ಬ್ರದರ್” ಚಿತ್ರದ ‘ಹಳೇ ಸನ್ಯಾಸಿ’ ಸಾಂಗ್ ರಿಲೀಸ್.. ಚಿತ್ರತಂಡಕ್ಕೆ ನಟಿ ರಾಗಿಣಿ ದ್ವಿವೇದಿ ಸಾಥ್!







