ಬೆಂಗಳೂರು : ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕಿ, ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು, ಸಚಿವ ಜಮೀರ್ ಅಹ್ಮದ್ ಖಾನ್ ಆದಾಯದ ಮೂಲಗಳನ್ನು ಶೋಧಿಸಿದಾಗ ಸಾಲ ಕೊಟ್ಟವರ ಪಟ್ಟಿ ಸಿಕ್ಕಿದೆ. ಇದರಲ್ಲಿ ನಿರ್ಮಾಪಕಿ, ನಟಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ರಾಧಿಕಾ ಕುಮಾರಸ್ವಾಮಿ ಅವರಿಂದ ಲೋಕಾಯುಕ್ತ ಪೊಲೀಸರು ವಿವರಣೆ ಪಡೆದುಕೊಂಡಿದ್ದಾರೆ.

ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು 2 ಕೋಟಿ ರೂ. ಸಾಲ ಕೊಟ್ಟಿದ್ದರು ಎಂಬ ವಿಷಯ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಅಲ್ಲದೇ ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ರಾಧಿಕಾ ಕುಮಾರಸ್ವಾಮಿ ಒಪ್ಪಿಕೊಂಡು ಅಧಿಕೃತ ಹೇಳಿಕೆ ಸಹ ದಾಖಲಿಸಿದ್ದಾರೆ. ಚಿತ್ರ ನಿರ್ಮಾಣದಿಂದ ಬಂದ ಹಣದಿಂದ ಜಮೀರ್ ಅಹ್ಮದ್ಗೆ ರಾಧಿಕಾ ಕುಮಾರಸ್ವಾಮಿಯವರು ನೆರವು ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಹಣ ನೀಡಿದ ಬಗ್ಗೆ ಸೂಕ್ತ ದಾಖಲೆಗಳನ್ನ ಒದಗಿಸಲು ಲೋಕಾಯುಕ್ತ ಪೊಲೀಸರು ರಾಧಿಕಾ ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆ.

ಇನ್ನೂ ಲೋಕಾಯುಕ್ತ ಪೊಲೀಸರು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದ ತನಿಖೆಯನ್ನು 2024ರಲ್ಲಿ ತೀವ್ರಗೊಳಿಸಿದ್ದರು. ಜಮೀರ್ ಅವರಿಗೆ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರ ನಿರ್ಮಾಣದಿಂದ ಬಂದ ಹಣದ ಮೂಲಕ ಬರೋಬ್ಬರಿ ಕೋಟಿ ರೂಪಾಯಿಗಳ ಹಣಕಾಸು ನೆರವು ನೀಡಿರುವುದು ಇದೀಗ ಬೆಳಕಿಗೆ ಬಂದಿದೆ. ಈ ವ್ಯವಹಾರವು 2012ರಲ್ಲಿ ರಾಧಿಕಾ ನಿರ್ಮಾಣ ಮಾಡಿದ ಯಶ್ ನಟನೆಯ ‘ಲಕ್ಕಿ’ ಚಿತ್ರದ ಸಂದರ್ಭದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಜಮೀನು ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ, ಜಾತಿ ನಿಂದನೆ – ನಿರ್ಮಾಪಕ ಕೃಷ್ಣ ಚೈತನ್ಯ ಸೇರಿ ಇತರರ ವಿರುದ್ಧ FIR!







