ಮಂಗಳೂರು : ಧರ್ಮಸ್ಥಳದ ಕೇಸ್ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈಗಾಗಲೇ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಕೇಸ್‌ಗೆ ಸಂಬಂಧ ಪಟ್ಟಂತೆ ರಾಜಕೀಯದಲ್ಲಿಯೂ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಜೆಡಿಎಸ್ ಸತ್ಯಯಾತ್ರೆ ಕೈಗೊಂಡಿದೆ.

ಜೆಡಿಎಸ್ ಪಕ್ಷದ ವತಿಯಿಂದ JDS ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ‘ಧರ್ಮಸ್ಥಳ ಯಾತ್ರೆ’ ನಡೆಯುತ್ತಿದೆ. ಇಂದು ಬೆಳಗ್ಗೆ ಹಾಸನ ತಾಲ್ಲೂಕಿನ ಕಂದಲಿ ಗ್ರಾಮದಿಂದ ‘ಧರ್ಮಸ್ಥಳ ಯಾತ್ರೆ’ಗೆ ಚಾಲನೆ ನೀಡಲಾಗಿದೆ. ರಾಜ್ಯದ ಹಲವು ಭಾಗಗಳಿಂದ ಧರ್ಮಸ್ಥಳ ಯಾತ್ರೆಗೆ ಜನರು ಆಗಮಿಸಿದ್ದು, ಹಾಸನ ಜಿಲ್ಲೆಯಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು & ಭಕ್ತರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಕಂದಲಿ ಗ್ರಾಮದಿಂದ ಯಾತ್ರೆ ಆರಂಭವಾಗಿದ್ದು, ಧರ್ಮಸ್ಥಳಕ್ಕೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ JDSನಿಂದ ಯಾತ್ರೆ ಕೈಗೊಳ್ಳಲಾಗಿದೆ.

ಧರ್ಮಸ್ಥಳದ ವಿರುದ್ದ ಅಪಪ್ರಚಾರ ಖಂಡಿಸಿ ನಡೆಯುತ್ತಿರುವ ಸತ್ಯ ಯಾತ್ರೆಯಲ್ಲಿ ಜೆಡಿಎಸ್ನ ಹಾಲಿ ಶಾಸಕರು, ಮಾಜಿ ಶಾಸಕರು, JDS ಮುಖಂಡರು ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ. ಬಸ್ & ಕಾರುಗಳ ಮೂಲಕ ಕಾರ್ಯಕರ್ತರು & ಭಕ್ತರು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ & ಕಾರ್ಯಕರ್ತರು ಧರ್ಮಸ್ಥಳದಲ್ಲಿ ಜಮಾವಣೆಯಾಗಲಿದ್ದು, ನೇತ್ರಾವತಿ ನದಿ ದಡದಿಂದ ಶ್ರೀ ಮಂಜುನಾಥನ ದೇವಾಲಯದವರೆಗೂ ಪಾದಯಾತ್ರೆ ನಡೆಸಲಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿಯಾಗಲಿದ್ದಾರೆ. JDS ನಾಯಕರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿಯಾಗಿ ನೈತಿಕ ಸ್ಥೈರ್ಯ ತುಂಬಲಿದ್ದಾರೆ.
ಧರ್ಮಸ್ಥಳ ಯಾತ್ರೆ ಬಗ್ಗೆ ಈಗಾಗಲೇ ಮಾಹಿತಿ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ನಡೆದಿರುವ ಬಗ್ಗೆ ಅನುಮಾನ ಇದೆ. ಇದರ ಬಗ್ಗೆ ಸತ್ಯಾಸತ್ಯತೆ ಹೊರತರಲು NIA ತನಿಖೆ ಅವಶ್ಯಕವಾಗಿದೆ. ಧರ್ಮಸ್ಥಳ ಪಾವಿತ್ರ್ಯತೆಯನ್ನ ಹಾಳು ಮಾಡಲು ಒಳಸಂಚು ರೂಪಿಸಿದ್ದು, ರಾಜ್ಯದ ಜನರಿಗೆ SIT ತನಿಖೆ ಮೇಲೆ ನಿರೀಕ್ಷೆಗಳಿಲ್ಲ. NIA ತನಿಖೆಗೆ ವಹಿಸಿದರೆ ಷಡ್ಯಂತ್ರ ಬಯಲಾಗಲಿದೆ ಎಂದು ಹೇಳಿದ್ದಾರೆ. ಧರ್ಮಸ್ಥಳ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿದ್ದು, ಧರ್ಮಸ್ಥಳ ನೇತ್ರಾವತಿಗೆ ತೆರಳಿ, ಅಲ್ಲಿ ಸ್ನಾನ ಮಾಡಿದ ಬಳಿಕ ಅಲ್ಲಿಂದ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ. ಈ ಯಾತ್ರೆಯಲ್ಲಿ ಜೆಡಿಎಸ್ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರು, ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.
ಇದನ್ನೂ ಓದಿ : 7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾ ಭೇಟಿ.. ಟಿಯಾಂಜಿನ್ನಲ್ಲಿ ಇಂದಿನಿಂದ ‘SCO’ ಶೃಂಗಸಭೆ!







