ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಿರುವುದು ಅಭಿಮಾನಿಗಳು ಹಾಗೂ ಚಿತ್ರರಂಗದವರಿಗೆ ತುಂಬಾ ನೋವುಂಟುಮಾಡಿದೆ. ಹಿರಿಯ ನಟ ಬಾಲಕೃಷ್ಣ ಅವರ ಕನಸಿನ ಕೂಸಾದ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಪುಣ್ಯಭೂಮಿ ನೆಲಸಮಗೊಂಡ ಸುದ್ದಿ ಎಲ್ಲರನ್ನೂ ಆಘಾತಕ್ಕೀಡುಮಾಡಿತು. ಇದೀಗ ಕೆಂಗೇರಿ ಹೋಬಳಿಯಲ್ಲಿರುವ ಅಭಿಮಾನ್ ಸ್ಟುಡಿಯೋದ ಜಮೀನನ್ನು ಅರಣ್ಯ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಅಭಿಮಾನ್ ಸ್ಟುಡಿಯೋದ ಭೂಮಿಯನ್ನು ಅರಣ್ಯ ಪ್ರದೇಶವೆಂದು ಆ. 28ರಂದು ಘೋಷಣೆ ಮಾಡಲಾಗಿದ್ದು, ಅದರ ಆದೇಶ ಪ್ರತಿಯನ್ನು ಅರಣ್ಯ ಇಲಾಖೆಯು ಬೆಂಗಳೂರು ಜಿಲ್ಲಾಧಿಕಾರಿಗೆ ರವಾನಿಸಿದೆ. ಇಡೀ ಜಾಗವನ್ನು ಅರಣ್ಯ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದ ಜಮೀನನ್ನು ಸರ್ಕಾರ ಮತ್ತೆ ಹಿಂಪಡೆಯಲು ನಿರ್ಧರಿಸಲಾಗಿದೆ.
ಜಮೀನು ಹಿಂಪಡೆಯುವ ನಿರ್ಧಾರ ಯಾಕೆ?
60ರ ದಶಕದಲ್ಲಿ ಬಾಲಕೃಷ್ಣ ಅವರಿಗೆ ಸರ್ಕಾರದಿಂದ ನೀಡಲಾಗಿರುವ 20 ಎಕರೆ ಭೂಮಿ ನೀಡಲಾಗಿತ್ತು. ನಿಯಮಗಳ ಪ್ರಕಾರ, 20 ವರ್ಷಗಳವರೆಗೆ ಆ ಭೂಮಿಯನ್ನು ಯಾರಿಗೂ ಪರಭಾರೆ ಮಾಡುವಂತಿಲ್ಲ. ಆದರೆ, ಅದರಲ್ಲಿ 12 ಎಕರೆಯನ್ನು ಬಾಲಕೃಷ್ಣ ಅವರ ಮಕ್ಕಳು ಮಾರಾಟ ಮಾಡಿದ್ದಾರೆ. ಅದಕ್ಕೆ ಅವರು ಹೇಳಿರುವ ಕಾರಣ, ಅಭಿಮಾನ್ ಸ್ಟುಡಿಯೋ ಕಟ್ಟಲು ಹಣ ಬೇಕಾಗಿದ್ದರಿಂದ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಹಾಗಾಗಿ, ಉಳಿದ ಎಂಟು ಎಕರೆ ಜಾಗವನ್ನು, ಜಮೀನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕೆ ದಂಡದ ರೂಪವಾಗಿ ಸರ್ಕಾರದ ಸುಪರ್ದಿಗೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಭಿಮಾನ್ ಸ್ಟುಡಿಯೋದ ಜಾಗವನ್ನು ಮಾರಾಟ ಮಾಡಿದ್ದರೂ ಅದರಿಂದ ಬಂದ ಹಣವನ್ನು ಅಭಿಮಾನ್ ಸ್ಟುಡಿಯೋದ ಅಭಿವೃದ್ಧಿಗೂ ಬಳಸಿಲ್ಲವಾದ್ದರಿಂದ ಅದೂ ಸಹ ನಿಯಮಗಳ ಉಲ್ಲಂಘನೆಯ ಪಟ್ಟಿಗೆ ಸೇರುತ್ತದಾದ್ದರಿಂದ ಉಳಿಕೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ : ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಬಸ್ ಪಲ್ಟಿ – ಇಬ್ಬರು ಸಾವು, 11 ಜನರಿಗೆ ಗಾಯ!







