DG-IGP ಡಾ.ಎಂ.ಎ. ಸಲೀಂ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌!

ಬೆಂಗಳೂರು : IPS ಅಧಿಕಾರಿ ಡಾ.ಎಂ.ಎ ಸಲೀಂ ಅವರನ್ನು DG – IGPಯಾಗಿ ನೇಮಕ ಮಾಡಿದ್ದನ್ನು ಪ್ರಶ್ನೆ ಮಾಡಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ವಕೀಲೆ ಸುಧಾ ಕಾಟ್ವಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದರು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ನೇಮಕಾತಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಪ್ರಭಾರ ಡಿಜಿಪಿ ಡಾ.ಎಂ.ಎ. ಸಲೀಂ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ಕಾಯಂ ಡಿಜಿಪಿಯನ್ನು ನೇಮಿಸುವಾಗ ಒಂದು ನಿರ್ದಿಷ್ಟ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿತ್ತು. ಯಾವುದೇ ಕಾರಣಕ್ಕೂ ಕಾರ್ಯಕಾರಿ ಅಥವಾ ಪ್ರಭಾರ ಡಿಜಿಪಿಯನ್ನು ನೇಮಿಸಬಾರದು. ಪ್ರಭಾರ ಡಿಜಿಪಿ ಎಂಬ ಪರಿಕಲ್ಪನೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ರಾಜ್ಯ ಸರ್ಕಾರವು ಈ ಆದೇಶವನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ವಕೀಲರು ಉಲ್ಲೇಖಿಸಿದ್ದರು.

1993 ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದ ಡಾ. ಸಲೀಂ ಅವರು ಅಲೋಕ್ ಮೋಹನ್ ನಿವೃತ್ತರಾದ ನಂತರ ಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡರು. ಡಾ. ಸಲೀಂ ಪ್ರಸ್ತುತ ಸಿಐಡಿಯ ಡಿಜಿಪಿ ಆಗಿದ್ದಾರೆ. ಇದರ ಜೊತೆಗೆ ರಾಜ್ಯದ ಡಿಜಿಪಿ ಮತ್ತು ಐಜಿಪಿಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಹೊಂದಿದ್ದಾರೆ. ಹೈಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿದೆ. ಸರ್ಕಾರವು ಶೀಘ್ರದಲ್ಲೇ ಡಿಜಿಪಿ ಹುದ್ದೆಗೆ ನೇಮಕಾತಿ ಮಾಡುವುದಾಗಿ ಹೇಳಿದೆ. ಹಾಗಾಗಿ ಸದ್ಯಕ್ಕೆ ಡಾ. ಸಲೀಂ ಅವರೇ ಡಿಜಿಪಿ ಆಗಿ ಮುಂದುವರಿಯಲಿದ್ದಾರೆ.

ಇದನ್ನೂ ಓದಿ : ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಅಕ್ಟೋಬರ್ 24ಕ್ಕೆ ರಾಜ್ಯಾದ್ಯಂತ ತೆರೆಗೆ!

Btv Kannada
Author: Btv Kannada

Read More