ಬೆಂಗಳೂರು : ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯವರನ್ನು ಜಾರಿ ನಿರ್ದೇಶನಾಲಯ (ED) ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಬಂಧಿಸಿದೆ.
5 ದಿನಗಳ ಕಸ್ಟಡಿ ಪಡೆದಿದ್ದ ಇ.ಡಿ ಅಧಿಕಾರಿಗಳು ವೀರೇಂದ್ರ ಪಪ್ಪಿಯವರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಇಂದು 5 ದಿನದ ಕಸ್ಟಡಿ ಅಂತ್ಯಗೊಂಡಿದ್ದು, ಹೀಗಾಗಿ ವೀರೇಂದ್ರ ಪಪ್ಪಿಯವರನ್ನು ಬೆಂಗಳೂರಿನ 35ನೇ ಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಈ ವೇಳೆ ಶಾಸಕ ವೀರೇಂದ್ರ ಪಪ್ಪಿ ಇ.ಡಿ ಅಧಿಕಾರಿಗಳ ಮೇಲೆಯೇ ಸಾಲು ಸಾಲು ಆರೋಪ ಮಾಡಿದ್ದಾರೆ. ನ್ಯಾಯಾಧೀಶ ಗಜಾನನ ಭಟ್ ಅವರ ಮುಂದೆ ಶಾಸಕ ಪಪ್ಪಿ, ಇ.ಡಿಯ ಕಸ್ಟಡಿಯಲ್ಲಿ ತಮಗಾದ ಕಷ್ಟಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದು, ನನಗೆ ಕಸ್ಟಡಿಯಲ್ಲಿ ಏನೇ ಆದ್ರೂ ಇ.ಡಿ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿ ಟ್ಯಾಪ್ ನೀರು, ಸರಿಯಿಲ್ಲದ ಊಟ, ಗಾಳಿ-ಬೆಳಕಿಲ್ಲದ ಕೊಠಡಿ, ಕಿಟಕಿಯ ಕೊರತೆ ಎಂಬ ಸಾಲು ಸಾಲು ಆರೋಪವನ್ನು ಇ.ಡಿ ಅಧಿಕಾರಿಗಳ ಮೇಲೆ ಮಾಡಿದ್ದಾರೆ. ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡೆಸಿದಾಗ ಶಾಸಕ ವೀರೇಂದ್ರ ಪಪ್ಪಿ, ಫುಡ್ ಪಾಯ್ಸನಿಂಗ್‌ನಿಂದ ಉಸಿರಾಟದ ತೊಂದರೆ, ಒಂದು ಕುರ್ಚಿಯ ಕೊರತೆ, ಮತ್ತು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಆಹಾರ ನೀಡುತ್ತಿರುವುದರ ಬಗ್ಗೆ ದೂರಿದ್ದಾರೆ. ಅಲ್ಲದೇ, ಶುದ್ಧ ಕುಡಿಯುವ ನೀರು, ಮೊಸರು, ಕುರ್ಚಿ, ಮತ್ತು ಸರಿಯಾದ ಆಹಾರ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ನನಗೆ ಕಸ್ಟಡಿಯಲ್ಲಿ ಏನೇ ಆದ್ರೂ ಇ.ಡಿ ಅಧಿಕಾರಿಗಳೇ ಹೊಣೆ ಎಂದು ವೀರೇಂದ್ರ ಪಪ್ಪಿ ಗಂಭೀರ ಆರೋಪ ಮಾಡಿದ್ದಾರೆ. ಶಾಸಕರ ಈ ಆರೋಪಗಳಿಂದ ಇ.ಡಿಯ ಕಾರ್ಯವೈಖರಿಯ ಬಗ್ಗೆಯೂ ತೀವ್ರ ಚರ್ಚೆ ಆರಂಭವಾಗಿದೆ.







