ಬೆಂಗಳೂರು : ಮುಹೂರ್ತ ವೇಳೆ ಕಲ್ಯಾಣ ಮಂಟಪಕ್ಕೆ ನುಗ್ಗಿ ಚಿನ್ನಾಭರಣ, ನಗದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿವಾಸಿ ಪರಮೇಶ್ವರ(55) ಬಂಧಿತ ಆರೋಪಿ.
ಬಂಧಿತ ಪರಮೇಶ್ವರ್ನಿಂದ 36.91 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನದ ಗಟ್ಟಿ, 91 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಕಲ್ಯಾಣ ಮಂಟಪ, ಕನ್ವೆನ್ಸನ್ ಸೆಂಟರ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಪರಮೇಶ್ವರ್, ಮದುವೆ ಸಮಾರಂಭಗಳಿಗೆ ಅತಿಥಿಯಂತೆ ಹೋಗುತ್ತಿದ್ದ. ಇನ್ನೂ ಈತ ಮದುವೆ ಮನೆಯಲ್ಲಿ ಕದ್ದ ಚಿನ್ನಾಭರಣಗಳಿಂದಲೇ ಮೂರು ನಿವೇಶನ ಖರೀದಿಸಿ, ಇರಲಿಕ್ಕೊಂದು ಸ್ವಂತ ಮನೆಕಟ್ಟಿಕೊಂಡು ಹೆಂಡತಿ-ಮಕ್ಕಳ ಜತೆಗೆ ಸಂಸಾರ ಮಾಡಿಕೊಂಡಿದ್ದ. ಇದೀಗ ಈ ಖತರ್ನಾಕ್ ಖದೀಮ ಪೊಲೀಸರ ಅತಿಥಿಯಾಗಿದ್ದಾನೆ.
2025ರ ಮೇ 14ರಂದು ಠಾಣೆ ವ್ಯಾಪ್ತಿಯ ಇಂಡಸ್ಟ್ರೀಯಲ್ ಟೌನ್‌ನಲ್ಲಿರುವ ಕಮ್ಯೂನಿಟಿ ಸೆಂಟರ್‌ವೊಂದಕ್ಕೆ ನುಗ್ಗಿ 31000 ರೂ. ನಗದು ದೋಚಿ ಪರಾರಿಯಾಗಿದ್ದ. ಆ ಬಳಿಕ ಗುಬ್ಬಿ ರೈಲು ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದಾಗ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಹೇಗೆ ಕಳ್ಳತನ? ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಗಳಿಗೆ ನೀಟಾಗಿ ಉಡುಪು ಧರಿಸಿ ಅತಿಥಿಯಂತೆ ಪರಮೇಶ್ ತೆರಳುತ್ತಿದ್ದ. ತಾಳಿ ಕಟ್ಟುವ ಸಮಯಕ್ಕೆ ಧಾರೆ ಮಂಟಪದ ಬಳಿ ಹೋಗುತ್ತಿದ್ದ ಆತ, ಮಾಂಗಲ್ಯಧಾರಣೆ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಮಾತನಾಡುವವನಂತೆ ನಟಿಸಿ ವಧು ಅಥವಾ ವರನ ಕೋಣೆಗೆ ನುಗ್ಗುತ್ತಿದ್ದ. ತಾಳಿ ಕಟ್ಟುವ ವೇಳೆ ಧಾರೆ ಮಂಟಪದಲ್ಲಿ ಜನ ನೆರೆಯುತ್ತಿದ್ದ ಕಾರಣ ಆ ಕೋಣೆಗಳಲ್ಲಿ ಯಾರೂ ಇರುತ್ತಿರಲಿಲ್ಲ. ಇದರ ಲಾಭ ಪಡೆದು ಅಲ್ಲಿದ್ದ ಚಿನ್ನ ಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ವಿವರಿಸಿದ್ದಾರೆ.
ಮೇ 14 ರಂದು ರಾಜಾಜಿನಗರದ ಕೈಗಾರಿಕಾ ಪ್ರದೇಶದ ಸಮುದಾಯ ಭವನದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಶಂಕರ್ ಮಗಳ ಮದುವೆಯಲ್ಲಿ ಕಳ್ಳತನ ಮಾಡಿದ್ದ. ಈ ಕೃತ್ಯದ ತನಿಖೆಗಿಳಿದ ಪೊಲೀಸರು ಕಲ್ಯಾಣ ಮಂಟಪದ ಸಿಸಿಟಿವಿ ಹಾಗೂ ಮದುವೆ ಚಿತ್ರೀಕರಣದ ದೃಶ್ಯಾವಳಿ ಪರಿಶೀಲಿಸಿದಾಗ ಪರಮೇಶ್ ಜಾಡು ಸಿಕ್ಕಿದೆ. ಈತನ ಬಂಧನದಿಂದ ಬಸವನಗುಡಿ, ಕೆಂಗೇರಿ, ಮಾಗಡಿ ರಸ್ತೆ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಎಂಟು ಕಳ್ಳತನ ಪ್ರಕರಣಗಳೂ ಇದೀಗ ಬೆಳಕಿಗೆ ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಗಣೇಶ ಹಬ್ಬಕ್ಕೆ ಬಾಳೆಕಂಬ ತರುವಾಗ ವಿದ್ಯುತ್ ಸ್ಪರ್ಶ – ಓರ್ವ ಸ್ಥಳದಲ್ಲೇ ಸಾವು.. ಮತ್ತೋರ್ವ ಗಂಭೀರ!







