ಹಾವೇರಿ : ಹಾವೇರಿಯ ಇನಾಂನಿರಲಗಿ ಗ್ರಾಮದಲ್ಲಿ ಗಣೇಶ ಹಬ್ಬದ ಸಿದ್ಧತೆಯ ವೇಳೆ ದಾರುಣ ಘಟನೆಯೊಂದು ನಡೆದಿದೆ. ಬಾಳೆಕಂಬ ತರುವಾಗ ವಿದ್ಯುತ್ ತಂತಿ ಬೇಲಿಯ ಸ್ಪರ್ಶದಿಂದ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಯುವಕನಿಗೆ ಗಂಭೀರ ಗಾಯಗಳಾಗಿವೆ. ಈ ಪರಿಣಾಮ ಗಣೇಶ ಚತುರ್ಥಿ ಆಚರಿಸಬೇಕಾದ ಗ್ರಾಮದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ಇನಾಂನಿರಲಗಿ ಗ್ರಾಮದ ನಿವಾಸಿಗಳಾದ ಅಣ್ಣಪ್ಪ ಕ್ಯಾಸನೂರ್ (27) ಮತ್ತು ಮಂಜುನಾಥ ಸಿದ್ದಮ್ಮನವರ್ (23) ಗಣೇಶ ಹಬ್ಬದ ಸಿದ್ಧತೆಗಾಗಿ ಸ್ಥಳೀಯ ನಿವಾಸಿಗಳಾದ ಪ್ರಭು ಹಾವೇರಿ ಮತ್ತು ಅಭಿಯವರ ಜಮೀನಿಗೆ ಬಾಳೆಕಂಬ ತರಲು ತೆರಳಿದ್ದರು. ಈ ವೇಳೆ ಜಮೀನಿನಲ್ಲಿ ಕಾಡು ಪ್ರಾಣಿಗಳು ಪ್ರವೇಶಿಸದಂತೆ ತಡೆಯಲು ಅಳವಡಿಸಲಾಗಿದ್ದ ವಿದ್ಯುತ್ ತಂತಿ ಬೇಲಿಯನ್ನು ಯುವಕರು ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ.
ಈ ಘಟನೆಯಲ್ಲಿ ವಿದ್ಯುತ್ ಆಘಾತದಿಂದ ಅಣ್ಣಪ್ಪ ಕ್ಯಾಸನೂರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮಂಜುನಾಥ ಸಿದ್ದಮ್ಮನವರ್ ಬದುಕಿದ್ದು, ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯು ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಬಂಧಪಟ್ಟ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ‘ಪೆದ್ದಿ’ ಸಿನಿಮಾ ಶೂಟಿಂಗ್.. ಸಾವಿರ ಡ್ಯಾನ್ಸರ್ಸ್ ಜೊತೆ ರಾಮ್ ಚರಣ್ ಭರ್ಜರಿ ಸ್ಟೆಪ್ಸ್!







