ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಇಂದು ಹಸೆಮಣೆ ಏರುತ್ತಿದ್ದಾರೆ. ಗೌರಿ ಗಣೇಶ ಹಬ್ಬದಂದು ಅನುಶ್ರೀ ಹಾಗೂ ರೋಷನ್ ಅವರ ಅರಿಶಿನ ಶಾಸ್ತ್ರದ ಕಾರ್ಯಕ್ರಮ ನಡೆದಿದೆ. ಸಂಗೀತ್, ಮೆಹೆಂದಿ ಎಲ್ಲವನ್ನು ಬಹಳ ಖಾಸಗಿಯಾಗಿಯೇ ಅದ್ಧೂರಿಯಾಗಿ ಮಾಡಿಕೊಳ್ಳಲಾಗಿದೆ. ಇದೀಗ ಆ್ಯಂಕರ್ ಅನುಶ್ರೀ-ರೋಷನ್ ಹಳದಿ ಶಾಸ್ತ್ರದಲ್ಲಿ ಮಿಂದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನೂ ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದು, ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ ʻಬಂದರೋ ಬಂದರೋ ಬಾವ ಬಂದರೋʼ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.


ಇಂದು (ಆ. 28) ನಿರೂಪಕಿ ಅನುಶ್ರೀ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಉದ್ಯಮಿ ರೋಷನ್ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ. ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಮದುವೆ ಶಾಸ್ತ್ರ ನಡೆಯಲಿದ್ದು, ಬೆಂಗಳೂರಿನ ಕಗ್ಗಲೀಪುರದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಅದ್ದೂರಿ ವಿವಾಹ ನಡೆಯಲಿದೆ. ಈ ವಿವಾಹಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಾಕ್ಷಿ ಆಗಲಿದ್ದಾರೆ.

ಅನುಶ್ರೀ ಹಾಗೂ ರೋಷನ್ ಅವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಈ ಬಗ್ಗೆ ಅನುಶ್ರೀ ಅವರೇ ರಿವೀಲ್ ಮಾಡಬೇಕಿದೆ. ನಿರೂಪಕಿ ಅನುಶ್ರೀ ಅವರ ಪತಿ ರೋಷನ್ ರಾಮಮೂರ್ತಿ ಹಾಗೂ ಸಿಸಿಲಿಯಾ ದಂಪತಿಯ ಪುತ್ರ. ರೋಷನ್ ಮೂಲತಃ ಕೂರ್ಗ್‌ನವರಾಗಿದ್ದು, ಉದ್ಯಮಿಯಾಗಿದ್ದಾರೆ.

ಕನ್ನಡದಲ್ಲಿ ಬಹು ಬೇಡಿಕೆಯುಳ್ಳ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಮದುವೆ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಅವರು ಎಲ್ಲೇ ಹೋದರೂ, ʻಮದುವೆ ಯಾವಾಗ?ʼ ಅನ್ನೋ ಪ್ರಶ್ನೆಯನ್ನ ಅಭಿಮಾನಿಗಳಲ್ಲದೇ ನಟ-ನಟಿಯರೂ ಕೇಳುತ್ತಲೇ ಇದ್ದರು. ಆಗೆಲ್ಲಾ ಫನ್ನಿಯಾಗಿ ಏನನ್ನಾದರೂ ಉತ್ತರಿಸಿ ಅನುಶ್ರೀ ಸುಮ್ಮನಾಗಿ ಬಿಡುತ್ತಿದ್ದರು. ಆದರೆ, ʻಈ ವರ್ಷ ಮದುವೆ ಆಗುತ್ತೇನೆʼ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು. ಅದರಂತೆಯೇ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸುದ್ದಿ ಕೇಳಿ ಅನುಶ್ರೀ ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.

ಇದನ್ನೂ ಓದಿ : ಬಸ್ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ – ಇಬ್ಬರು ಸಾವು







