ಧರ್ಮಸ್ಥಳ ಕೇಸ್ – ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ 3 ತಲವಾರು ಪತ್ತೆ!

ಮಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ SIT ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಮಾಸ್ಕ್‌ಮ್ಯಾನ್ ಚಿನ್ನಯ್ಯನ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಶವ ಹೂತಿಟ್ಟ ಉತ್ಖನನ ಕಾರ್ಯದಿಂದ ಇದೀಗ ದೂರುದಾರ, ಆರೋಪ ಮಾಡಿದವವರ ಮೇಲೆ ತನಿಖೆ ನಡೆಯುತ್ತಿದೆ. ಅರೆಸ್ಟ್ ಆಗಿರುವ ಚಿನ್ನಯ್ಯನ ಹೇಳಿಕೆ ಆಧರಿಸಿ SIT ಮಹೇಶ್ ತಿಮರೋಡಿ ಮನೆ ಮೇಲೆ ದಾಳಿ ಮಾಡಿದೆ. ಮಾಸ್ಕ್‌ಮ್ಯಾನ್ ಸಮ್ಮುಖದಲ್ಲಿ ಮಹಜರು ನಡೆಸಿ ಹಲವು ವಸ್ತುಗಳನ್ನ ಸೀಜ್ ಮಾಡಿದ್ದಾರೆ. ಇನ್ನು ಈ ವೇಳೆ ಮೂರು ತಲವಾರುಗಳು ಪತ್ತೆಯಾಗಿವೆ.

ನಿನ್ನೆ ತಡ ರಾತ್ರಿವರೆಗೂ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಜಾಲಾಡಿದ್ದಾರೆ. ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ರಿಪೋರ್ಟ್ ತಯಾರಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಪತ್ತೆಯಾದ ಮೂರು ತಲವಾರನ್ನು SIT ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ಮಾಡುವ ಮೊದಲೇ ಮಹೇಶ್ ಶೆಟ್ಟಿ ಮನೆಯಿಂದ ತೆರಳಿದ್ದರು. ದಾಳಿ ವೇಳೆ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಇತ್ತ ಮನೆ, ತೋಟ ಸೇರಿದಂತೆ ಎಲ್ಲಾ ಕಡೆ ಪರಿಶೋಧನೆ ನಡೆಸಿದ SIT ಅಧಿಕಾರಿಗಳು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮಹೇಶ್ ಶೆಟ್ಟಿ ಪತ್ನಿ, ಮಗ ಹಾಗೂ ಮಗಳ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಮಹೇಶ್ ಶೆಟ್ಟಿ ಮನೆಯಲ್ಲಿ ಉಳಿದುಕೊಂಡಿದ್ದ ಚಿನ್ನಯ ತನ್ನ ಎರಡೂ ಮೊಬೈಲ್ ಅಲ್ಲೆ ಇಟ್ಟಿದ್ದ. ವಿಚಾರಣೆ ವೇಳೆ ತನ್ನ ಬಳಿ ಮೊಬೈಲ್ ಇಲ್ಲ ಎಂದಿದ್ದ. ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧ ವೇಳೆ ಚಿನ್ನಯ್ಯನ ಎರಡು ಮೊಬೈಲ್ ಪತ್ತೆಯಾಗಿವೆ. ಒಂದು ಕೀಪ್ಯಾಡ್ ಮೊಬೈಲ್ ಮತ್ತೊಂದು ಆ್ಯಂಡ್ರಾಯ್ಡ್ ಮೊಬೈಲ್. ಆರಂಭದಲ್ಲಿ ಕೀ ಪ್ಯಾಡ್ ಮೊಬೈಲ್ ಬಳಸುತ್ತಿದ್ದ ಚಿನ್ನಯ್ಯ, ಬಳಿಕ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಬಳಸಲು ಆರಂಭಿಸಿದ್ದ. ಕಳೆದ ಕೆಲ ತಿಂಗಳುಗಳಿಂದ ಆ್ಯಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿದ್ದ. ಇದರ ಜೊತೆಗೆ ಚಿನ್ನಯ್ಯನ ಲಗೇಜ್ ಬ್ಯಾಗ್, ಬೆನ್ನ ಹಿಂದೆ ಹಾಕುವ ಬ್ಯಾಗ್, ಬಟ್ಟೆ ಸೇರಿದಂತೆ ಕೆಲ ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ವಸಂತ್ ಗಿಳಿಯಾರ್ ವಿರುದ್ಧ FIR ದಾಖಲು – ಯಾವುದೇ ಕ್ಷಣ ಅರೆಸ್ಟ್!

Btv Kannada
Author: Btv Kannada

Read More