ಬೆಂಗಳೂರು : ಕುಡಿದು ಮತ್ತಲ್ಲಿ ಭಕ್ತಿ ತೋರಲು ಹೋಗಿ ಗಣೇಶನ ವಿಗ್ರಹ ವಿರೂಪಗೊಳಿಸಿದ ಕಿರಾತಕನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಿವು ಬಂಧಿತ ಆರೋಪಿ.

ಗಾರೆ ಭಾವಿಪಾಳ್ಯದ ಖಾಸಗಿ ಬಿಲ್ಡಿಂಗ್ ಬಳಿ ಗಣೇಶ ವಿಗ್ರಹ ಇರಿಸಲಾಗಿತ್ತು. ಬಿಲ್ಡಿಂಗ್ ಮುಂಭಾಗದಲ್ಲಿ 2 ಅಡಿ ಎತ್ತರದ ಕಲ್ಲಿನ ವಿಗ್ರಹ ಪ್ರತಿಷ್ಠಾಪನೆಯಾಗಿತ್ತು. ಕಳೆದ 24ರಂದು ಬೆಳಗ್ಗೆ ಸ್ಥಳೀಯರು ನೋಡಿದಾಗ ವಿಗ್ರಹ ವಿರೂಪವಾಗಿತ್ತು.

ವಿಗ್ರಹದ ಎಡ ಕಿವಿ ಮತ್ತು ಎಡ ಕೈ ಭಾಗಗಳು ಹಾನಿಯಾಗಿತ್ತು. ಆ ಬಳಿಕ ಕಿಡಿಗೇಡಿಗಳು ವಿಗ್ರಹ ವಿರೂಪಗೊಳಿಸಿದ್ದಾರೆಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಪರಿಶೀಲನೆ ನಡೆಸಿದಾಗ ಶಿವು ಎಂಬಾತ ಕೃತ್ಯ ಎಸಗಿರೋದು ಬೆಳಕಿಗೆ ಬಂದಿತ್ತು.

ಹಿಂದಿನ ದಿನ ರಾತ್ರಿ ಕುಡಿದು ಬಿಲ್ಡಿಂಗ್ ಬಳಿ ಬಂದಿದ್ದ ಆರೋಪಿ ಶಿವು, ಗಣೇಶ ಮೂರ್ತಿಗೆ ಕೈ ಮುಗಿದು ಭಕ್ತಿ ತೋರಲು ಹೋಗಿದ್ದ. ಆಗ ಆತ ಆಯತಪ್ಪಿ ಶಿವು ಬಿದ್ದಿದ್ದರಿಂದ ಗಣೇಶನ ವಿಗ್ರಹ ವಿರೂಗೊಂಡಿದೆ. ಸದ್ಯ ಸ್ಥಳೀಯರ ದೂರಿನ ಆಧಾರದ ಮೇಲೆ ಶಿವುವನ್ನ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಘಟನಾ ಸಂಬಂಧ ಪ್ರಕರಣ ದಾಖಲಾಗಿದೆ.







