ಬೆಂಗಳೂರು : ರಾಜಧಾನಿಯಲ್ಲಿ ನಮ್ಮ ಮೆಟ್ರೋ ಹಳಿಗೆ ಬಿದ್ದು ಹಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿವೆ. ಇದೀಗ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಆಯತಪ್ಪಿ ಹಳಿಗೆ ಬಿದ್ದಿರುವ ಘಟನೆ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮೆಟ್ರೋ ಸ್ಟೇಷನ್‌ನ ಪ್ಲಾಟ್‌ಫಾರ್ಮ್ ಮೇಲೆ ಇದ್ದ ಮೆಟ್ರೋ ಸಿಬ್ಬಂದಿ ಹಳಿಯ ಸಮೀಪ ಹೋದಾಗ ಆಯತಪ್ಪಿ ಬಿದ್ದಿದ್ದಾರೆ. ಇದನ್ನು ನೋಡಿ ಅಲ್ಲಿಯೇ ಇದ್ದ ಪ್ರಯಾಣಿಕನೊಬ್ಬ ಸಿಬ್ಬಂದಿಯನ್ನು ಕೈ ಹಿಡಿದು ಮೇಲಕ್ಕೆ ಎತ್ತಿದ್ದಾನೆ. ಅದೃಷ್ಟಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗಸ್ಟ್ 25 ರಂದು ಬೆಳಿಗ್ಗೆ 11.10ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿಲ್ದಾಣ ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ವಿಡಿಯೋ – pic.twitter.com/4X4hxm42iP
ಗಾರ್ಡ್ ನೆರವಿಗೆ ಬಂದ ಪ್ರಯಾಣಿಕ : ಮೆಟ್ರೋ ಸಿಬ್ಬಂದಿ ಹಳಿ ಮೇಲೆ ಬಿದ್ದ ಕೂಡಲೇ ಸ್ಥಳದಲ್ಲೇ ಮೆಟ್ರೋಗಾಗಿ ಕಾಯುತ್ತಿದ್ದ ಪ್ರಯಾಣಿಕರ ಸಿಬ್ಬಂದಿಯನ್ನು ಮೇಲಕ್ಕೆತ್ತಿದ್ದಾರೆ. ಗಾರ್ಡ್ ಹಳಿ ಮೇಲೆ ಬೀಳುತ್ತಿದ್ದಂತೆಯೇ ಕೈ ನೀಡಿದ ಪ್ರಯಾಣಿಕ ಅವರನ್ನು ರಕ್ಷಿಸಿದ್ದಾರೆ.
ಬಿಎಂಆರ್ ಸಿಎಲ್ ಸ್ಪಷ್ಟನೆ : ಈ ಘಟನೆ ಕುರಿತು ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ‘ಗಾರ್ಡ್ ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಕರ್ತವ್ಯದಲ್ಲಿದ್ದಾಗ ಜಾರಿಬಿದ್ದಿದ್ದು, ಕೂಡಲೇ ಎಚ್ಚೆತ್ತ ಸಹ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹಳಿ ಮೇಲೆ ಬಿದ್ದ 52 ವರ್ಷದ ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಅವರು ಸುರಕ್ಷಿತವಾಗಿದ್ದಾರೆ. ಘಟನಾ ಸಂದರ್ಭದಲ್ಲಿ ಸುರಕ್ಷತಾ ಕ್ರಮವಾಗಿ ಸುಮಾರು ಆರು ನಿಮಿಷಗಳ ಕಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು BMRCL ಹೇಳಿದೆ.
ಇದನ್ನೂ ಓದಿ : ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಭೂಕುಸಿತ – 5 ಮಂದಿ ಸಾವು, 14 ಜನರಿಗೆ ಗಾಯ!







