ಮಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳಿನ ಪ್ರಚಾರ ನಡೆಸಿದವರನ್ನು ಎಸ್ಐಟಿ ತನಿಖೆ ನಡೆಸುತ್ತಿದೆ. ಇದೀಗ ಬಂಧಿತ ಆರೋಪಿ (ಮಾಸ್ಕ್ ಮ್ಯಾನ್) ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಆರೋಪದ ಹಿನ್ನೆಲೆ ಇಂದು ಬೆಳ್ಳಂಬೆಳಗ್ಗೆ ಎಸ್ಐಟಿ ಅಧಿಕಾರಿಗಳು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ತಿಮರೋಡಿ ಸಹೋದರ ಮೋಹನ್ ಕುಮಾರ್ ಶೆಟ್ಟಿ ಮನೆ ಮೇಲೂ SIT ದಾಳಿ ನಡೆಸಿದೆ.

ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಶೋಧಕ್ಕೆ ಸರ್ಚ್ ವಾರೆಂಟ್ (ನ್ಯಾಯಾಲಯದ ಅನುಮತಿ) ಪಡೆದ SIT, ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ತಿಮರೋಡಿ ಮನೆಗೆ ಮಹಜರು ನಡೆಸಲು ತೆರಳಿದೆ. ತಿಮರೋಡಿ ಮನೆಯಲ್ಲಿ ಸತತ ಒಂದೂವರೆ ಗಂಟೆಗಳಿಂದ ಇಂಚಿಂಚೂ ಶೋಧ ನಡೆಸುತ್ತಿರುವ ಅಧಿಕಾರಿಗಳು, ಮನೆಯ ಸುತ್ತಲೂ ಬಿಗಿ ಬಂದೋ ಬಸ್ತ್ ಮಾಡಿದೆ.

ಪ್ರಮುಖವಾಗಿ ಚಿನ್ನಯ್ಯನ ಮೊಬೈಲ್ಗಾಗಿ ತಿಮರೋಡಿ ಮನೆಯಲ್ಲಿ ಶೋಧ ನಡೆದಿದ್ದು, ಆತನ ಬಳಸುತ್ತಿದ್ದ ಮೊಬೈಲ್ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಿಮರೋಡಿ ಮನೆಯಲ್ಲಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಶಂಕೆ ಇದ್ದು, ಈತ ಇದೇ ಮನೆಯಿಂದ ನಾನಾ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ಕೂಡ ನೀಡಿದ್ದ ಎನ್ನಲಾಗಿದೆ. ಹೀಗಾಗಿ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ನಡೆಸಿದೆ ಶೋಧ ಮುಂದುವರೆಸಿದೆ.

ಇದನ್ನೂ ಓದಿ : ಕೇಸರಿ ಶಾಲು ಹಾಕಿದ್ದಕ್ಕೆ ಕಲಾಸಿಪಾಳ್ಯದಲ್ಲಿ ಕಿರಿಕ್.. ಕಾರ್ಮಿಕನ ಬಟ್ಟೆ ಹರಿದು ಕಿಡಿಗೇಡಿಗಳಿಂದ ಹಲ್ಲೆ – ದೂರು ದಾಖಲು!







