ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ತುಂಬಿದ್ದು, ಓಡಾಡೋದೆ ಕಷ್ಟ ಕಷ್ಟ ಅಂತ ವಾಹನ ಸವಾರರು ಗೊಣಗುತ್ತಲೇ ಇದ್ದಾರೆ. ಇದೀಗ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಿನ್ನೆ ತಡರಾತ್ರಿ ದಿಢೀರ್ ಸಿಟಿ ರೌಂಡ್ಸ್ ಕೈಗೊಂಡು ರಿಯಾಲಿಟಿ ಚೆಕ್ ನಡೆಸಿದ್ದಾರೆ.

ಯಲಹಂಕಾ ಕ್ಷೇತ್ರದ ಬಾಗಲೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಧ್ಯರಾತ್ರಿ 1.30ರವರೆಗೂ ರಸ್ತೆ ಗುಂಡಿಗಳ ಪರಿಶೀಲನೆ ನಡೆಸಿದ್ದಾರೆ. ಡಿಸಿಎಂ ಜೊತೆಯಲ್ಲಿ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಮತ್ತು ಇತರೆ ಅಧಿಕಾರಿಗಳು ಕೂಡ ಇದ್ದರು. ಯಲಹಂಕ ವ್ಯಾಪ್ತಿಯ ರಸ್ತೆ ಗುಂಡಿಗಳ ಪರಿಶೀಲನೆ ನಡೆಸಿದ ಡಿಸಿಎಂ ಸ್ಥಳೀಯ ಅಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದಾರೆ.

ನಗರದ ಪ್ರದಕ್ಷಿಣೆ ಬಳಿಕ ಮಾತಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, “ನನಗೆ ಎಂಎಲ್ಎಗಳು ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಒಂದು ಆ್ಯಪ್ ಮಾಡಿದ್ದೇವೆ, ಇದನ್ನು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನಿಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಗುಂಡಿಗಳು ಇವೆ ಎಂಬ ಪಟ್ಟಿ ಕೊಡಿ ಎಂದು ತಿಳಿಸಿದ್ದೇವೆ. ಅವರೆಲ್ಲ ಪಟ್ಟಿ ನೀಡಿದ್ದಾರೆ. ಫಿಕ್ಸ್ ಮೈ ಸ್ಟ್ರೀಟ್ ಎಂಬ ಆ್ಯಪ್ ಕೂಡ ಮಾಡಲಾಗಿದೆ. ಜನರು ಈ ಆ್ಯಪ್‌ನಲ್ಲಿ ಫೋಟೋ ಕಳುಹಿಸಿಕೊಡುತ್ತಾರೆ. ನಮ್ಮ ಆಫೀಸರ್ಸ್ ಅದನ್ನು ಗುರುತಿಸಿ, ನಂತರ ಮುಚ್ಚುವ ಕೆಲಸ ಮಾಡುತ್ತಾರೆ” ಎಂದು ಹೇಳೀದ್ದಾರೆ.

ಗುಂಡಿಗಳನ್ನು ಮಾನಿಟರ್ ಮಾಡಲು ಆ್ಯಪ್ : “ರೀಸೆಂಟ್ ಆಗಿ ಬಾಗಲೂರು ರಸ್ತೆಯಲ್ಲಿ ಭೇಟಿ ನೀಡಿದ್ದೆ. ಈ ರಸ್ತೆಯ ಪರಿಸ್ಥಿತಿಯನ್ನು ನೋಡಿ ನನಗೆ ಬಹಳ ಬೇಜಾರಾಯಿತು. ಸದ್ಯಕ್ಕೆ 4400 ಕಡೆ ಗುಂಡಿ ಮುಚ್ಚಲು ಆರ್ಡರ್ ಕೊಟ್ಟಿದ್ದೇವೆ. ಕಳೆದ ನಾಲ್ಕೈದು ದಿನಗಳಿಂದ ಟಾರ್ ಹಾಕಲಾಗುತ್ತಿದೆ. ಸ್ಕೈ ವಾಕ್‌ಗಳನ್ನು ಕ್ಲೀನ್ ಮಾಡಲಾಗಿದೆ. ಗುಂಡಿಗಳನ್ನು ಮಾನಿಟರ್ ಮಾಡಲು ಆ್ಯಪ್ ಇದೆ ಎಂದು ಡಿಸಿಎಂ ಹೇಳಿದ್ದಾರೆ.

ಸಾರ್ವಜನಿಕರು ಗುಂಡಿ ಕಂಡ್ರೆ ಫೋಟೋ ಹಾಕಿ, ವಾಟ್ಸಾಪ್ ನಂಬರ್‌ಗೆ ಕಳುಹಿಸಿದ್ರೆ ಸಾಕು. ನಾವು ಬಂದು ಕೆಲಸ ಮಾಡುತ್ತೇವೆ. ಎಲ್ಲಾದ್ರೂ ಕಾಂಕ್ರೀಟ್ ರೋಡ್ಮಾಡಲಾಗುತ್ತದೆ. ಅದು 30 ವರ್ಷ ಬಾಳಿಕೆ ಬರುತ್ತದೆ. ಆದ್ರೆ ಟಾರ್ ರಸ್ತೆಗಳಲ್ಲಿ ಮಳೆ ಬಂದಾಗ, ದೊಡ್ಡ ದೊಡ್ಡ ವಾಹನ ಸಂಚರಿಸುವಾಗ ಗುಂಡಿ ಬೀಳುವುದು ಸಾಮಾನ್ಯ. ನಾವು ಎಲ್ಲೆಲ್ಲೂ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಸಹಕಾರವು ಬಹಳ ಮುಖ್ಯ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ‘ಓಂ ಶಿವಂ’ ಚಿತ್ರದ ಟ್ರೇಲರ್ ರಿಲೀಸ್.. ಚಿತ್ರತಂಡಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಾಥ್!







