ಗಣೇಶ ಹಬ್ಬ, ಈದ್‌ ಮಿಲಾದ್​ಗೆ ಡಿಜೆ ನಿಷೇಧ – ಪೊಲೀಸ್ ಸುತ್ತೋಲೆಯನ್ನು ಎತ್ತಿ ಹಿಡಿದ ಹೈಕೋರ್ಟ್‌!

ಬೆಂಗಳೂರು : ಗಣೇಶ್ ಚತುರ್ಥಿ ಮತ್ತು ಈದ್-ಮಿಲಾದ್​ ಹಬ್ಬದ ಹಿನ್ನೆಲೆಯಲ್ಲಿ ಮೆರವಣಿಗೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ ಮತ್ತು ಧ್ವನಿ ವರ್ಧಕಗಳ ಬಳಕೆ ನಿಷೇಧಿಸಿ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್​ ಜಂಟಿ ಆಯುಕ್ತರು ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಪದಾಧಿಕಾರಿಯಾಗಿದ್ದ ಶಂಕರ್​ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ ಈ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಅಲ್ಲದೆ, ಜನ ವಸತಿ ಪ್ರದೇಶಗಳಲ್ಲಿ ಹಗಲಿನಲ್ಲಿ 55 ಡೆಸಿಬಲ್​, ರಾತ್ರಿ ಸಂದರ್ಭದಲ್ಲಿ 45 ಡೆಸಿಬಲ್​ ಮಾತ್ರ ಹೊಂದಿರಬೇಕು ಎಂಬ ನಿಯಮವಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಮತ್ತು ಅಬ್ಬರದ ಧ್ವನಿ ವರ್ಧಕಗಳು ನಿಗದಿತ ಡೆಸಿಬಲ್​ಗಳಿಗೆ ಅನುಗುಣವಾಗಿರಲಿದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಪೊಲೀಸ್ ಜಂಟಿ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ಪೀಠ ಹೇಳಿದೆ.

ಅರ್ಜಿ ಕುರಿತು ದಾಖಲೆಗಳ ಪರಿಶೀಲಿಸಿದ ನ್ಯಾಯಪೀಠ, ಪೊಲೀಸ್ ಜಂಟಿ ಆಯುಕ್ತರು ಹೊರಡಿಸಿರುವ ಸುತ್ತೋಲೆ ಹಬ್ಬದ ಸಂದರ್ಭಗಳಿಗೆ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡ ನಿರ್ಣಯವಾಗಿದೆ. ಹಬ್ಬಗಳ ಸಂದರ್ಭಗಳಲ್ಲಿ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗಳ ಉದ್ದೇಶದಿಂದ ಈ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಕಾನೂನು ಪ್ರಕಾರ ಡಿಜೆ ಬಳಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಪೀಠ ತಿಳಿಸಿದೆ.

ಇನ್ನು, ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್​ಗಳನ್ನು ಹಾಕಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವ ಸಂಘಟಕರಿಗೆ ಅನುಮತಿ ನೀಡುವ ಸಲುವಾಗಿ ಸುತ್ತೋಲೆ ಹೊರಡಿಸಲಾಗಿದೆ. ಜಂಟಿ ಪೊಲೀಸ್​ ಆಯುಕ್ತರ ಆದೇಶದಲ್ಲಿ ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿಲ್ಲ. ಜತೆಗೆ, ಹೆಚ್ಚಿನ ಮಾರ್ಗಸೂಚಿಗಳು ರಚನೆ ಮಾಡಬೇಕಾದ ಅಗತ್ಯವೂ ಇಲ್ಲ ಎಂದು ಪೀಠ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2025ರ ಆಗಸ್ಟ್​ 14ರಂದು ಪಶ್ಚಿಮ ವಿಭಾಗದ ಪೊಲೀಸ್​ ಜಂಟಿ ಆಯುಕ್ತರು ಹೊರಡಿಸಿರುವ ಆದೇಶ, ಅರ್ಜಿದಾರರಿಗೆ ಸಂವಿಧಾನದ ಪರಿಚ್ಛೇದ 19(1)(ಜಿ)(ಉದ್ಯೋಗ ಮಾಡುವ ಹಕ್ಕು)ಅಡಿಯಲ್ಲಿ ಲಭ್ಯವಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಿದೆ. ಅಲ್ಲದೆ, ಒಂದೆಡೆ, ಅಬ್ಬರ ಸಂಗೀತ ಹೊರಸೂಸುವ ಉಪಕರಣಗಳ ತಯಾರಿಕೆ ಮತ್ತು ಮಾರಾಟಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ಅವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

ಅಲ್ಲದೆ, ಪೊಲೀಸ್ ಅಧಿಕಾರಿಗಳು ಏಕಾಏಕಿ ಡಿಜೆ ಮತ್ತು ಅಬ್ಬರದ ಧ್ವನಿವರ್ಧಕಗಳಿಗೆ ನಿರ್ಬಂಧ ಹೇರುವುದಕ್ಕೂ ಮುನ್ನ ಶಬ್ದ ಮಾಲಿನ್ಯ ನಿಯಮಗಳು 2000ರ ಅಡಿಯಲ್ಲಿ ಮಾರ್ಗಸೂಚಿಗಳನ್ನು ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಇದನ್ನೂ ಓದಿ : BTVಯ ಅಸಿಸ್ಟೆಂಟ್​​​​​ ಎಡಿಟರ್​​​​​​ ಶಿಲ್ಪಾ ಗೌಡಗೆ ಈ ವರ್ಷದ TNIT ಸಂಸ್ಥೆಯ ಬೆಸ್ಟ್ ಆ್ಯಂಕರ್ ಅವಾರ್ಡ್​!

Btv Kannada
Author: Btv Kannada

Read More