ಡಾ. ಕೆ ಸುಧಾಕರ್ ಹೆಸರು ಬರೆದಿಟ್ಟು ಡ್ರೈವರ್ ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್ – ಕಾರು ಚಾಲಕ ಬಾಬುನೇ 18 ಲಕ್ಷ ಪಡೆದು ವಂಚನೆ ಆರೋಪ!

ಚಿಕ್ಕಬಳ್ಳಾಪುರ : ಬಿಜೆಪಿ ಸಂಸದ ಡಾಕೆ ಸುಧಾಕರ್ ಅವರ ಹೆಸರು ಬರೆದಿಟ್ಟು ಜಿಲ್ಲಾ ಪಂಚಾಯತಿ ಆವರಣದಲ್ಲಿ ಕಾರು ಚಾಲಕ ಆತ್ಮಹತ್ಯೆಗೆ ಶರಣಾಗಿದ್ದ. ಆತನ ಕಾರಿನಲ್ಲಿ ಪತ್ತೆಯಾದ ಡೆತ್ ನೋಟ್​ನಲ್ಲಿ ನನ್ನ ಸಾವಿಗೆ ಸಂಸದ ಸುಧಾಕರ್ ಹಾಗೂ ಅವರ ಆಪ್ತರಾದ ನಾಗೇಶ್ ಮಂಜುನಾಥ್ ಕಾರಣ ಎಂದು ಉಲ್ಲೇಖಿಸಿದ್ದ. ಈ ಪ್ರಕರಣ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಬುವೇ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ತನ್ನ ಬಳಿ 18 ಲಕ್ಷ ರೂ.ಪಡೆದು ವಂಚನೆ ಮಾಡಿದ್ದಾನೆ ಎಂದು ಬಾಬು ಬಾಲ್ಯ ಸ್ನೇಹಿತ ನಟೇಶ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ DySP ಲಿಖಿತ ದೂರು ಸಹ ನೀಡಿದ್ದಾರೆ. 

ಇನ್ನೂ ಮೃತ ಬಾಬು ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದ ಅಜ್ಜಿ ಮನೆಯಲ್ಲಿ ಬೆಳೆದವನು. ಇನ್ನೂ ಅದೇ ಗ್ರಾಮದ ನಟೇಶ್ ಹಾಗೂ ಬಾಬು ಇಬ್ಬರು SSLC ವರೆಗೂ ಜೊತೆಯಲ್ಲೇ ವ್ಯಾಸಂಗ ಮಾಡಿದ್ದು, ಬಾಲ್ಯ ಸ್ನೇಹಿತರಾಗಿದ್ದರು. ಹಾಗಾಗಿ ತನಗೆ ಬಾಬು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಪತ್ರಾಂಕಿತ ವ್ಯವಸ್ಥಾಪಕನಾಗಿ ಕೆಲಸ ಕೊಡಿಸುವುದಾಗಿ ನಂಬಿಸಿ 18 ಲಕ್ಷ ಪಡೆದುಕೊಂಡಿದ್ದಾನೆ. ಅದಕ್ಕೆ ಪೂರಕವಾಗಿ ಗೌರಿಬಿದನೂರಿನ ಹೋಟೆಲ್​ವೊಂದರಲ್ಲಿ ಆತನಿಗೆ ಹಣ ನೀಡಿರುವ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆತನ ಖಾತೆಗೆ ಪೋನ್ ಪೇ ಮೂಲಕ ವರ್ಗಾವಣೆ ಮಾಡಿರುವ ದಾಖಲೆಗಳಿವೆ ಎಂದಿದ್ದಾರೆ.

ಮತ್ತೊಂದೆಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಗೇಶ ಹಾಗೂ ಮಂಜುನಾಥ್​ಗೆ ನ್ಯಾಯಾಲಯ ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇನ್ನು ಸುಧಾಕರ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್​ ಮಧ್ಯಂತರ ಆದೇಶ ಹೊರಡಿಸಿದೆ. ಸದ್ಯ ಬಾಬು ಆತ್ಮಹತ್ಯೆ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲಾ ನಾಗರೀಕ ಹಕ್ಕು ಜಾರಿ ನಿದೇಶನಾಲಯದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗೆ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ : ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ – ಸಿಎಂ ಸಿದ್ದರಾಮಯ್ಯ ಘೋಷಣೆ!

Btv Kannada
Author: Btv Kannada

Read More