ಇತ್ತೀಚೆಗಷ್ಟೇ ಕೃಷ್ಣಜನ್ಮಾಷ್ಟಮಿ ಸಂಭ್ರಮ ಮುಗಿದಿದೆ. ಆದರೆ ಅದರ ಸದ್ದು, ಕೃಷ್ಣನ ಮುದ್ದು ಮುಗಿಯುವಂತದ್ದಲ್ಲ. ಕಲರ್ಸ್ ಕನ್ನಡದ ‘ನಂದಗೋಕುಲ’ ಕತೆಯಲ್ಲಿ ಕೃಷ್ಣನನ್ನ ಆರಾಧಿಸಲು ಒಂದು ಹೊಸ ಪ್ರಯತ್ನ ಮಾಡಲಾಗಿದೆ. ಟಿವಿ ಮಾಧ್ಯಮ ಎಲ್ಲರ ಮನೆಯನ್ನು ತಲುಪುವ ಮೊದಲು ಕನ್ನಡಿಗರ ಮನಸ್ಸಲ್ಲಿ ಉಚ್ಛ ಸ್ಥಾನದಲ್ಲಿದ್ದದ್ದು ‘ಹರಿಕಥೆ’. ಸಂಗೀತದ ತಿಳುವಳಿಕೆ, ಪುರಾಣಗಳ ಜ್ಞಾನ, ಕತೆ ಹೇಳುವ ವಿಶಿಷ್ಟ ಕಲೆ. ಈ ಕಲೆಯನ್ನ ಗೌರವಿಸುವ ನಿಟ್ಟಿನಲ್ಲಿ, ಇದೀಗ ನಂದನ-ಗೋಕುಲದಲ್ಲಿ ಗೋಕುಲಾಷ್ಟಮಿಯ ನೆಪದಲ್ಲಿ ಹರಿಕತೆಯನ್ನ ಮಾಡಲಾಗುತ್ತಿದೆ.

ನಂದಗೋಕುಲ ಕಿರುತೆರೆಯ ವಲಯದಲ್ಲಿ ವಿಭಿನ್ನ ಕಥಾ ಹಂದರ ಹೊಂದಿರುವ ಹೊಸ ರೀತಿಯ ಕತೆ, ಮನೆ-ಮನಸ್ಸುಗಳನ್ನ ತಾಕಿರುವ ಪ್ರತಿಯೊಬ್ಬ ಅಪ್ಪನ ಕತೆ. ವಿಶೇಷವಾದ ಮನ ಮುಟ್ಟುವ ಪಾತ್ರಗಳಿಗೆ ಹೆಸರಾದ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಗಿರಿಜಾ ಹರಿಕತೆ ಮಾಡಲಿದ್ದಾರೆ. ಸೊಸೆ ಮೀನಾಳಿಗೆ ಮನೆಯಲ್ಲಿ ಒಂದು ಹಾರ್ಮೋನಿಯಂ ಸಿಗುತ್ತದೆ. ಇದು ಯಾರದ್ದು ಎಂದು ವಿಚಾರಿಸಿದಾಗ ಗಿರಿಜಾ ಮೂವತ್ತು ವರ್ಷಗಳ ಹಿಂದೆ ಹರಿಕಥೆಯನ್ನು ಮಾಡುತ್ತಿದ್ದ ವಿಷಯ ತಿಳಿಯುತ್ತದೆ. ಅಣ್ಣಂದಿರು ಅವಳ ಮದುವೆಯನ್ನು ತಿರಸ್ಕರಿಸಿದ ಕಾರಣಕ್ಕೆ ದುಃಖದಲ್ಲಿ ಗಿರಿಜಾ ತನ್ನ ಈ ಇಷ್ಟದ ಕಲೆಯನ್ನ ತ್ಯಜಿಸಿದ್ದಾಳೆ ಎನ್ನುವ ವಿಷಯ ತಿಳಿದಾ ಮೀನಾ ಅತ್ತೆಯಿಂದ ಮತ್ತೆ ಹರಿಕಥೆ ಮಾಡಿಸಬೇಕು ಎಂದು ನಿರ್ಧರಿಸುತ್ತಾಳೆ. ಕೃಷ್ಣಜನ್ಮಾಷ್ಟಮಿಯ ದಿನ ಮೀನಾ ಗಿರಿಜಾಳ ಬಳಿ ಒತ್ತಾಯ ಮಾಡಿ ಹರಿಕಥೆ ಮಾಡಿಸುತ್ತಾಳೆ ಎಂಬಂತೆ ಕತೆ ಸಾಗುತ್ತದೆ.

ಇದರಲ್ಲಿಯೂ ಇನ್ನೂ ವಿಶೇಷವೆಂದರೆ, ಗಿರಿಜಾ ಪಾತ್ರಧಾರಿ ಅಮೃತಾ ನಾಯ್ಡು ಬಹು ಪ್ರಖ್ಯಾತ ಹರಿಕತೆ ಕಲಾವಿದ ಗುರುರಾಜ ನಾಯ್ಡು ಅವರ ಮೊಮ್ಮಗಳು. ರಕ್ತದಲ್ಲಿಯೇ ಈ ವಿಶಿಷ್ಟ ಕಲೆಯನ್ನ ಹೊಂದಿರುವ ಅಮೃತಾ ಅವರು ಪ್ರಸ್ತುತಪಡಿಸಲಿರುವ ಹರಿಕತೆ ಬಹಳ ಚಂದದಲ್ಲಿ ಮೂಡಿಬಂದಿರುತ್ತದೆ. ಪಾರಂಪರ್ಯದಿಂದಲೂ ಹರಿಕತೆ ಮಾಡುತ್ತ ಬಂದಿರುವ ಕುಟುಂಬದ ಕುಡಿ, ಇಡೀ ಕರ್ನಾಟಕದ ಜನತೆಗೆ ಶ್ರೀಕೃಷ್ಣನ ಲೀಲೆಯ ಕತೆಯನ್ನ ಉಣಬಡಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಿ, ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ, ನಂದಗೋಕುಲ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ.
ಇದನ್ನೂ ಓದಿ : ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಚಿತ್ರ “45” ಡಿ.25ಕ್ಕೆ ರಿಲೀಸ್!







