ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಟಿ.ಎನ್ ಜವರಾಯಿ ಗೌಡ ಅವರು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಜಾರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಡಿ.ಕೆ ಶಿವಕುಮಾರ್ ಅವರು ಈ ವಿಚಾರ ತಿಳಿಸಿದ್ದಾರೆ. ಈ ಮೂಲಕ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಲ ಕೂಡಿಬಂದಂತಾಗಿದೆ.
“ಮೇ 15ರಂದು ಜಿಬಿಎ ಕಾಯ್ದೆ ಜಾರಿ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಎಂದು ಘೋಷಣೆ ಮಾಡಲಾಗಿದೆ. ಜುಲೈ 19ರಂದು ಐದು ಪಾಲಿಕೆ ರಚಿಸಲಾಗಿದೆ. ಆಗಸ್ಟ್ 18ರವರೆಗೆ ಒಂದು ತಿಂಗಳ ಕಾಲ ಆಕ್ಷೇಪ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ದಾಸರಹಳ್ಳಿ, ಆರ್.ಆರ್ ನಗರ, ಪದ್ಮನಾಭ ನಗರ, ಮಹದೇವಪುರ, ಯಶವಂತಪುರ ಕೆಲವು ವಿಧಾನಸಭಾ ಕ್ಷೇತ್ರಗಳು ಭಾಗ ಆಗಿವೆ ನಿಜ. ಇನ್ನು ಕೆಲವು ಪ್ರದೇಶಗಳನ್ನು ಮುಂದಿನ ದಿನಗಳಲ್ಲಿ ಸೇರಿಸಬೇಕಿದೆ” ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
“ವಾರ್ಡ್‌ಗಳ ಪುನರ್ ವಿಂಗಡಣೆ ಸೆಪ್ಟೆಂಬರ್ 1ಕ್ಕೆ ನಡೆಯಲಿದೆ. ಇದಕ್ಕಾಗಿ ಪಾಲಿಕೆಯಲ್ಲಿ ಆಯುಕ್ತರ ನೇತೃತ್ವದ ಪ್ರತ್ಯೇಕ ತಂಡ ಇದೆ. ನಾವು ನ್ಯಾಯಾಲಯಕ್ಕೆ ಕಾಲ ಮಿತಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದೇವೆ. ಇನ್ನು ವಾರ್ಡ್‌ಗಳ ರಚನೆ ಬಗ್ಗೆ ಪುನರ್ ವಿಂಗಡಣೆ ಬಳಿಕ ಅಧಿಸೂಚನೆ ಹೊರಡಿಸಲಾಗುವುದು” ಎಂದು ವಿವರಿಸಿದ್ದಾರೆ. ಇನ್ನೂ ಆದಷ್ಟು ಬೇಗ ಚುನಾವಣೆ ನಡೆಸಿ ಎಂದು ಸದಸ್ಯರ ಮನವಿಗೆ ಸ್ಪಂದಿಸಿದ ಸಚಿವರು, “ಮಾನ್ಯ ಸದಸ್ಯರ ಸಲಹೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ” ಎಂದು ಡಿಕೆಶಿ ಹೇಳಿದ್ದಾರೆ.
ಡಿಸೆಂಬರ್ ನಲ್ಲಿ ಬೆಂಗಳೂರಿನ 5 ಪಾಲಿಕೆಗಳಿಗೆ ಚುನಾವಣೆ? ಡಿಸೆಂಬರ್ ವೇಳೆಗೆ 6 ವರ್ಷಗಳಿಂದ ಮುಂದೂಡಲ್ಪಟ್ಟಿರುವ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಗ್ರೇಟರ್ ಬೆಂಗಳೂರು ವ್ಯಾಪ್ತಿಯನ್ನು 5 ಪಾಲಿಕೆಗಳಾಗಿ ವಿಭಜಿಸುವ ಕುರಿತ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಜನರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ವಾರ್ಡ್‌ಗಳ ವಿಂಗಡಣೆ ಮತ್ತು ಮೀಸಲಾತಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಡಿಸೆಂಬರ್‌ನಲ್ಲಿ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಪ್ರಮಾಣಪತ್ರ : ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಇದೇ ಜುಲೈ 29ರಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಿದೆ. ಬೆಂಗಳೂರಿನ ಮಹಾನಗರ ಪಾಲಿಕೆಯನ್ನು ಐದು ಭಾಗಗಳಾಗಿ ವಿಭಜಿಸಿ ಹೊಸ ಗಡಿಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ತಾವು ಸಿದ್ಧರಾಗಿರುವುದಾಗಿ ಸರ್ಕಾರವು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ಈಗಾಗಲೇ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನವೆಂಬರ್ 1ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ನಂತರ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ, ನವೆಂಬರ್ ಅಂತ್ಯದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ನಿವಾಸದ ಮೇಲೆ ED ರೇಡ್!







