ಬೆಂಗಳೂರು : ಗೌರಿ-ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ಬೆಂಗಳೂರಲ್ಲಿ ಬಿಬಿಎಂಪಿ ಸಕಲ ಸಿದ್ಧತೆ ನಡೆಸಿದ್ದು, ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದೆ. ಬೃಹತ್ ಪಾಲಿಕೆ ಜೊತೆ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಕೈ ಜೋಡಿಸಿದ್ದು, ಪಿಓಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ, ವಿಸರ್ಜನೆ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಗೌರಿ-ಗಣೇಶ ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಆಚರಿಸುವ ಸಂಭ್ರಮದ ಹಬ್ಬ. ಅತ್ಯಂತ ವೈಭವದಿಂದ ಆಚರಿಸುವ ಹಬ್ಬಕ್ಕೆ ನಮ್ಮ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಸುಖ, ಶಾಂತಿ ಸಮೃದ್ಧಿಗಾಗಿ ಎಲ್ಲೆಡೆ ಪೂಜೆ-ಪುನಸ್ಕಾರ ನಡೆಯುತ್ತೆ. ಆದ್ರೆ, ಹಬ್ಬದ ನೆಪದಲ್ಲಿ ಪರಿಸರ ಮಾಲಿನ್ಯ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಗೌರಿ-ಗಣೇಶ ಹಬ್ಬಕ್ಕೆ ನಗರದಾದ್ಯಂತ ಭರದ ತಯಾರಿ ನಡೀತಿದೆ. ಗಣೇಶಮೂರ್ತಿ ತಯಾರಕರು ಈಗಾಗಲೇ ತರಹೇವಾರಿ ಗಣೇಶ ಮೂರ್ತಿಗಳನ್ನು ತಯಾರು ಮಾಡಿದ್ದು, ಮಾರಾಟವನ್ನೂ ಮಾಡುತ್ತಿದ್ದಾರೆ. ಈ ಮಧ್ಯೆ ಬಿಬಿಎಂಪಿ ಮಾರ್ಗಸೂಚಿ ಪ್ರಕಟಿಸಿದ್ದು, ಪಿಒಪಿಯಂತಹ ನಿಷೇಧಿತ ವಸ್ತುಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದಾಗಿ ಬಿಬಿಎಂಪಿ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಆಯಾ ಬಿಬಿಎಂಪಿ ಉಪವಿಭಾಗಗಳ ನೋಡಲ್ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ಮತ್ತು ಬೆಸ್ಕಾಂ ಇಲಾಖೆಗಳ ಅಧಿಕಾರಿಗಳಿಗೆ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಎರಡರ ಮೇಲೂ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ರಾಸಾಯನಿಕ ಬಣ್ಣಗಳು, ಥರ್ಮೋಕೋಲ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ನೈಸರ್ಗಿಕವಾದ ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಬೇಕೆಂದು ಬಿಬಿಎಂಪಿ ಸೂಚನೆ ನೀಡಿದೆ. ಇನ್ನೂ ಹಬ್ಬದ ನೆಪದಲ್ಲಿ ಜೋರಾಗಿ ಡಿಜೆ ಹಾಕಿಕೊಂಡು ಶಬ್ದ ಮಾಲಿನ್ಯ ಮಾಡುವಂತಿಲ್ಲ. ಗಣೇಶ ಕೂರಿಸಲು ಅನುಮತಿ ಕಡ್ಡಾಯ ಮಾಡಿ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ : ಮೈಕ್ರೋ ಫೈನಾನ್ಸ್ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ – ಸದನದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ!







