ಮುಂಬೈ ಮೂಲದ ‘ಮೈ ಭಾರತ್ ಹೂ ಫೌಂಡೇಶನ್’ ಸ್ವಯಂ ಸೇವಾ ಸಂಸ್ಥೆ ‘ಭಾರತ್ ಕೋ ಭಾರತ್ ಹೀ ಬೋಲಾ ಜಾಯೇ ಇಂಡಿಯಾ ನಹಿ’ (ಭಾರತವನ್ನು ಭಾರತವೆಂದೇ ಕರೆಯಿರಿ) ಎಂಬ ಅಭಿಯಾನ ಪ್ರಾರಂಭಿಸಿದ್ದು, ಈ ಅಭಿಯಾನದ ಭಾಗವಾಗಿ ‘ಭಾರತ್ ಈಸ್ ಭಾರತ್ ನಾಟ್ ಇಂಡಿಯಾ’ ಎಂಬ ಹೆಸರಿನಲ್ಲಿ ಭಾರತದ 22 ಭಾಷೆಗಳಲ್ಲಿ ‘ಭಾರತ್ ನಾಮ್ ಸಮ್ಮಾನ್’ ಹಾಡಿನ ಆಡಿಯೋ ಆಲ್ಬಂ ಅನ್ನು ಹೊರತರಲಾಗಿದೆ.

ಕನ್ನಡ, ಹಿಂದಿ, ಇಂಗ್ಲಿಷ್, ರಾಜಸ್ಥಾನಿ ಹೀಗೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಈ ಗೀತೆ ಮೂಡಿಬಂದಿದ್ದು, ಖ್ಯಾತ ಸಂಗೀತ ನಿರ್ದೇಶಕ ದಿಲೀಪ್ ಸೇನ್ ಲತಾ ಹಯಾ ಸಂಗೀತ ಸಂಯೋಜನೆಯಲ್ಲಿ ಈ ‘ಭಾರತ್ ನಾಮ್ ಸಮ್ಮಾನ್’ ಆಡಿಯೋ ಆಲ್ಬಂ ಮೂಡಿಬಂದಿದೆ. ಈ ಮ್ಯೂಸಿಕ್ ಆಲ್ಬಂನ ಗೀತೆಗಳಿಗೆ ಗಾಯಕರಾದ ಮೊಹಮ್ಮದ್ ಸಲಾಮತ್, ದೀಪಕ್, ರೇಖಾ ರಾವ್ ಮೊದಲಾದವರು ಧ್ವನಿಯಾಗಿದ್ದಾರೆ. ಸ್ವಾತಂತ್ರೋತ್ಸವದ ಮಾಸದಲ್ಲೇ ಈ ಗೀತೆ ಕೇಳುಗರ ಮುಂದೆ ಬಂದಿದ್ದು, ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಮ್ಯೂಸಿಕ್ ಆಲ್ಬಂ ಅನ್ನು ಬಿಡುಗಡೆಗೊಳಿಸಿದರು.

ಇನ್ನು ಈ ಮ್ಯೂಸಿಕ್ ಆಲ್ಬಂನ ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ರಾಜಸ್ಥಾನಿ ಅವತರಣಿಕೆಯೆ ವಿಡಿಯೋದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಮತ್ತು ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ಮಹೇಂದ್ರ ಮುಣೋತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗೀತೆಗೆ ಗಗನ್ ಆರ್. ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದು, ನಿರ್ದೇಶಕ ಬಿ. ಪಿ. ಹರಿಹರನ್ ಈ ಗೀತೆಯನ್ನು ನಿರ್ದೇಶಿಸಿ ತೆರೆಮೇಲೆ ತಂದಿದ್ದಾರೆ. ಕರ್ನಾಟಕದಿಂದ ರಾಜಸ್ಥಾನದವರೆಗೆ ಹಲವು ತಾಣಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ಮಹೇಂದ್ರ ಮುಣೋತ್ ಜೊತೆಗೆ ನೂರಾರು ಪ್ರಾದೇಶಿಕ ಭಾಷಾ ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ದೇಶಭಕ್ತಿ ಭಾವನೆಗಳನ್ನು ಪ್ರೇರೇಪಿಸುವಂತಿರುವ ಈ ಗೀತೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ‘ಭರತ್ ನಾಮ್ ಸಮ್ಮಾನ್’ ಮ್ಯೂಸಿಕ್ ಆಲ್ಬಂ ಬಿಡುಗಡೆಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ!







