ಬೆಂಗಳೂರು : ಕಳೆದ 45 ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಾ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಂಗಳವಾರ ಮೇಲ್ಮನೆಯಲ್ಲಿ ಸದಸ್ಯರು ಶ್ಲಾಘಿಸಿ ಅಭಿನಂಧಿಸಿದ್ದಾರೆ. ಅದೇ ರೀತಿ ವಿಧಾನ ಪರಿಷತ್ತಿನ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರ 45 ವರ್ಷಗಳ ಸುದೀರ್ಘ ಸೇವೆಯನ್ನು ಶ್ಲಾಘಿಸಿದ್ದಾರೆ.

ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ, ವಿವಿಧ ಖಾತೆಗಳ ಸಚಿವರಾಗಿ, ಸಭಾಪತಿಯಾಗಿ ಹೊರಟ್ಟಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡ ಸದಸ್ಯರು, ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಲು ಅವರು ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ, ಶಿಕ್ಷಕರ ಸಮಸ್ಯೆ ಬಗೆಹರಿಸಿರುವುದು ಕಾರಣವಾಗಿದೆ. ಅಪಾರ ಅನುಭವ ಹೊಂದಿರುವ ಹೊರಟ್ಟಿ ಅವರು ಪರಿಷ ತ್ತಿನ ಸದಸ್ಯರಾಗಿ 50 ವರ್ಷ ಸಹ ಪೂರೈಸಲಿ ಎಂದು ಸದಸ್ಯರು ಆಶಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, 18 ಮುಖ್ಯಮಂತ್ರಿಗಳು, 432 ಸಚಿವರು, ಐದು ಸಾವಿರ ಶಾಸಕರನ್ನು ನೋಡುವಂತಹ ಅವಕಾಶ ಬಸವರಾಜ ಹೊರಟ್ಟಿ ಅವರಿಗೆ ದೊರೆತಿದೆ. ಬಹುಶಃ ಇಂತಹ ಅವಕಾಶ ಬೇರೆ ಯಾರಿಗೂ ಸಿಗುವುದಿಲ್ಲ. ಹೊಸ ಸದಸ್ಯರಿಗೆ ಸಲಹೆ, ಸೂಚನೆ ನೀಡುವ ಮೂಲಕ ಸದಸ್ಯರು ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿಸಿಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಇನ್ನು, ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್, 1980ರಲ್ಲಿ ವಿಧಾನ ಪರಿಷತ್ತಿನ ಶಿಕ್ಷಣ ಕ್ಷೇತ್ರದಿಂದ ಬಸವರಾಜ ಹೊರಟ್ಟಿ ಅವರು ಆಯ್ಕೆಯಾಗಿ ಅಲ್ಲಿಂದ ಇಲ್ಲಿಯವರೆಗೂ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಸೋಲನ್ನು ಕಾಣದೆ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಸಭಾಪತಿಗಳಾಗಿ ತಾವು ಯಾವುದೇ ಪಕ್ಷ ಭೇದ ಮರೆತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ರೀತಿ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ತಮ್ಮ ಕುರ್ಚಿಗೆ ಅಪಮಾನವಾದಾಗ ಸೂಕ್ತ ರೀತಿಯ ತೀರ್ಮಾನ ತೆಗೆದುಕೊಂಡು ಕ್ರಮ ವಹಿಸಬೇಕಾಗಿತ್ತು. ಆದರೆ ತಾವು ಆ ಕೆಲಸ ಮಾಡಲಿಲ್ಲ. ತಾವು ಕಿರಿಯರಿಗೆ ಮಾರ್ಗದರ್ಶಕರಾಗಿದ್ದೀರಿ. ತಮ್ಮ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ : ಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ಅಸ್ತು – ಎಡಗೈ-ಬಲಗೈಗೆ 6% ಸಮಪಾಲು.. ಅಧಿವೇಶನದಲ್ಲಿಂದು ಸಿಎಂ ಸಿದ್ದರಾಮಯ್ಯ ಮಂಡನೆ!







