ಉಡುಪಿ : ಖ್ಯಾತ ಹೋಟೆಲ್ ಉದ್ಯಮಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಕಾರ್ಕಳದ ಬೈಲೂರು ಮೂಲದ ಉದ್ಯಮಿ ಕೃಷ್ಣರಾಜ ಹೆಗ್ಡೆ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) ತಮ್ಮ ಆತ್ರಾಡಿಯ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತರು ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಪ್ರಕರಣ ಸಂಬಂಧ ಸದ್ಯ ಹಿರಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಉದ್ಯಮಿ ಕೃಷ್ಣರಾಜ ಹೆಗ್ಡೆ ಅವರ ಸಾವಿನ ಸುದ್ದಿ ತಿಳಿದು ಆಪ್ತರು, ಊರಿನವರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಕೂಡ ಉದ್ಯಮಿ ಕೃಷ್ಣರಾಜ ಹೆಗ್ಡೆ ಅಗಲಿಕೆಗೆ ಕಂಬನಿ ಮಿಡಿದಿದ್ದು, ಆತ್ಮೀಯರಾದ ಶ್ರೀ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) ನಿಧನರಾಗಿರುವುದು ಅತ್ಯಂತ ದುಃಖ ಹಾಗೂ ನೋವಿನ ವಿಚಾರ.
ಯುವ ಉದ್ಯಮಿ, ಸಮಾಜ ಸೇವೆಯೊಂದಿಗೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಬೆಂಬಲಿಸುತ್ತಾ, ಬೈಲೂರು ಮಾರಿಯಮ್ಮ ದೇವಸ್ಥಾನದ ಕಾರ್ಯದರ್ಶಿಯಾಗಿ, ಅನೇಕ ವರ್ಷಗಳಿಂದ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಬಂದಿದ್ದ ತಮ್ಮಣ್ಣ ಇಂದು ನಮ್ಮೊಂದಿಗೆ ಇಲ್ಲ ಅನ್ನುವುದು ನಂಬಲಸಾಧ್ಯ. ತಮ್ಮಣ್ಣ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅಗಲಿದ ಶ್ರೀಯುತರ ಆತ್ಮದ ಸದ್ಗತಿಗಾಗಿ ಮತ್ತು ಕುಟುಂಬ ವರ್ಗ ಹಾಗೂ ಬಂಧು ಮಿತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ‘ಇಂಡಿಯಾ’ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ನ ಮಾಜಿ ನ್ಯಾ. ಸುದರ್ಶನ್ ರೆಡ್ಡಿ ಆಯ್ಕೆ!







