ಕೊಲೆ ಆರೋಪಿ ದರ್ಶನ್​​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ – ಕೋರ್ಟ್​ಗೆ ಅರ್ಜಿ ಸಲ್ಲಿಸಿದ SPP!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಮತ್ತು ಸಹ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ. ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿದ್ದು, ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಯಾರನ್ನು ಎಲ್ಲಿಗೆ ಶಿಫ್ಟ್ ಮಾಡಲಾಗುತ್ತದೆ? ಆರೋಪಿಗಳನ್ನು ಬೇರೆ ಜೈಲಿಗೆ  ಶಿಪ್ಟ್ ಮಾಡಲು ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ನಟ ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್‌ ಜೈಲು, ಜಗದೀಶ್, ಲಕ್ಷ್ಮಣ್ ಶಿವಮೊಗ್ಗ ಜೈಲು, ನಾಗರಾಜ್ ಗುಲ್ಬರ್ಗ ಜೈಲು ಮತ್ತು ಪ್ರದೂಷ್​​ನನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಬೇಕು, ಹಾಗೆಯೇ ಪ್ರಕರಣದ A1 ಆರೋಪಿ ಪವಿತ್ರಾ ಗೌಡ, ಅನುಕುಮಾರ್ ಅವರನ್ನು ಪರಪ್ಪನ ಅಗ್ರಹಾರದಲ್ಲೇ ಇರಿಸಬೇಕು ಎಂದು ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ಸ್ಥಳಾಂತರಕ್ಕೆ ಕಾರಣಗಳೇನು? ಆರೋಪಿಗಳ ರಾಜಾತಿಥ್ಯ ಮತ್ತು ಜೈಲು ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಬಾರಿಯ ರಾಜಾತಿಥ್ಯ ಪ್ರಕರಣವನ್ನು ಉಲ್ಲೇಖಿಸಿ, ಭದ್ರತಾ ಹಿತದೃಷ್ಟಿಯಿಂದ ಆರೋಪಿಗಳ ಸ್ಥಳಾಂತರ ಅತ್ಯಗತ್ಯ ಎಂದು ಮನವಿ ಮಾಡಲಾಗಿದೆ. ದರ್ಶನ್ ಅವರ ಜಾಮೀನು ರದ್ದು ಆದೇಶದ ಸಮಯದಲ್ಲಿ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಕಟುವಾಗಿ ಟೀಕಿಸಿತ್ತು. ನ್ಯಾಯಾಲಯದ ಈ ಖಂಡನೆಯಿಂದಾಗಿ, ಜೈಲು ಅಧಿಕಾರಿಗಳು ಯಾವುದೇ ಹೆಚ್ಚಿನ ವಿವಾದಗಳಿಗೆ ಅವಕಾಶ ನೀಡದಂತೆ ಆರೋಪಿಗಳನ್ನು ಬೇರೆಡೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.

ಈ ಸ್ಥಳಾಂತರದ ನಿರ್ಧಾರವು ಪ್ರಭಾವಿ ವ್ಯಕ್ತಿಗಳು ಬಂಧಿತರಾದಾಗ ಜೈಲುಗಳಲ್ಲಿ ಎದುರಾಗುವ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಹೊಸ ದಿಕ್ಕನ್ನು ಸೂಚಿಸುತ್ತದೆ. ನ್ಯಾಯಾಲಯದ ಅಂತಿಮ ತೀರ್ಪು ಬಂದ ನಂತರವೇ ಈ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ : ಧರ್ಮಸ್ಥಳದ ವಿರುದ್ದ ಮಾತನಾಡಿದವರ ಮೇಲೆ ಸುಮೊಟೊ ಕೇಸ್ ಹಾಕಿ – ಶಾಸಕ ಅಶ್ವತ್ಥ್​ ನಾರಾಯಣ್ ಆಗ್ರಹ!

Btv Kannada
Author: Btv Kannada

Read More