ಹಾಸನ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದ ವಿವಿಧಡೆ ವರುಣನ ಆರ್ಭಟ ತೀವ್ರಗೊಂಡಿದ್ದು, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರ ಸಂಜೆ ಮೇಘಸ್ಫೋಟ ಸಂಭವಿಸಿದ ಪರಿಣಾಮ ಕೇವಲ 2 ಗಂಟೆ ಅವಧಿಯಲ್ಲಿ 400 ಮಿ.ಮೀಟರ್ ಮಳೆ ಸುರಿದಿದ್ದರಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆ ಹೊಳೆಯಂತಾಗಿತ್ತು. ತೊರೆಗಳ ನೀರು ರಸ್ತೆಗೆ ಬೀಳುತ್ತಿದ್ದರಿಂದ ವಾಹನ ಸಂಚಾರದ ಮೇಲೆ ಪರಿಣಾಮವಾಗಿತ್ತು. ಮಳೆ ಆರ್ಭಟಕ್ಕೆ ಅಲ್ಲಲ್ಲಿ ಗುಡ್ಡ ಕುಸಿದ ಪರಿಣಾಮ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿ.ಮೀ ಗಟ್ಟಲೆ ವಾಹನಗಳು ನಿಂತಿದ್ದವು.

ಇನ್ನು ಹದ್ದಾರಿ ಅಧಿಕಾರಿಗಳು ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಿದರೆ, ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತುಂಡರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಕೆಂಪಳ್ಳ ಹಾಗೂ ಮಾರ್ನಳ್ಳಿ ಪ್ರದೇಶದಲ್ಲಿ ಭಾನುವಾರ ಸಂಜೆಯೂ ಗುಡ್ಡ ಕುಸಿತ ಉಂಟಾಗಿ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಎದುರಾಗಿದೆ. ಸುರಿಯುತ್ತಿರುವ ಭಾರಿ ಮಳೆಗೆ ಮಣ್ಣು ಮೆದುವಾಗಿ ಕುಸಿತ ಸಂಭವಿಸುತ್ತಿದೆ. ಸಕಲೇಶಪುರ ತಾಲೂಕಿನ ಹಾನುಬಾಳ್, ಕಸಬಾ ಹಾಗೂ ಹತ್ತೂರು ಹೋಬಳಿಯಲ್ಲಿ ಭತ್ತದ ಗದ್ದೆಗಳು ನದಿ ನೀರಿನಿಂದ ಆವೃತಗೊಂಡು ಕೆರೆಗಳಂತಾಗಿವೆ.

5 ಜಿಲ್ಲೆಗಳಿಗೆ ರೆಡ್ ಅಲರ್ಟ್.. ಶಾಲಾ-ಕಾಲೇಜಿಗೆ ಇಂದು ರಜೆ ಘೋಷಣೆ : ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಆ.18 ಹಾಗೂ ಆ.19ರಂದು ಭಾರಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಗಂಟೆಗೆ 60 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿರುವ ಕಾರಣ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ತಾಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಹೇಮಾವತಿ ನದಿ ಸಹ ಒಡಲು ಬಿಟ್ಟು ಹರಿಯುತ್ತಿದ್ದು, ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನ ಗರ್ಭಗುಡಿ ಪ್ರವೇಶಕ್ಕೆ ಕೆಲವೇ ಅಡಿ ಬಾಕಿ ಉಳಿದಿದೆ. ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಆ.18ರಂದು ರಜೆ ಘೋಷಿಸಲಾಗಿದೆ.

ರೈಲು ಸಂಚಾರಕ್ಕೆ ಅಡ್ಡಿ : ಸಕಲೇಶಪುರ-ಸುಬ್ರಮಣ್ಯ ಸಂಪರ್ಕಿಸುವ ರೈಲ್ವೆ ಸಂಚಾರ ಭೂಕುಸಿತದಿಂದಾಗಿ ಶನಿವಾರ ರಾತ್ರಿ ಸ್ಥಗಿತಗೊಂಡಿತ್ತು. ತಾಲೂಕಿನ ದೋಣಿಗಾಲ್, ಕಡಗರಹಳ್ಳಿ ಹಾಗೂ ಯಡಕುಮರಿ ವ್ಯಾಪ್ತಿಯ 7 ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳು ನೂರಾರು ನೌಕರರೊಂದಿಗೆ ಆಗಮಿಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಭಾನುವಾರ ಮುಂಜಾನೆ 6.30ರ ವೇಳೆಗೆ ರೈಲು ಸಂಚಾರಕ್ಕೆ ಮುಕ್ತಗೊಳಿಸಿದರು. ಮಂಗಳೂರಿನಿಂದ ಈ ಭಾಗವಾಗಿ ಸಂಚರಿಸಬೇಕಿದ್ದ 10ಕ್ಕೂ ಅಧಿಕ ರೈಲುಗಳ ಮಾರ್ಗವನ್ನು ಬದಲಿಸಿ ಪುಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ.

ಇನ್ನೂ ಹಾಸನ ಹೊರತುಪಡಿಸಿ ಮಲೆನಾಡು ಜಿಲ್ಲೆಗಳಲ್ಲಿ ಗಾಳಿ-ಮಳೆಯ ಆರ್ಭಟ ಜೋರಾಗಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ. ಬೆಂಗಳೂರು ನಗರ ಸೇರಿ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ದಿನವಿಡೀ ಮಳೆ ರಚ ಹಿಡಿದಿತ್ತು. ನಿರಂತರ ವರ್ಷಧಾರೆಗೆ ಜನ ಹೈರಾಣಾಗಿದ್ದಾರೆ. ರೈತಾಪಿ ವರ್ಗದವರು ಕೃಷಿ ಚಟುವಟಿಕೆ ನಡೆಸಲಾಗದೆ ವರುಣ ಬಿಡುವು ಕೂಡಲೆಂದು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ : ನಟ ಅಜಯ್ ರಾವ್ ಡಿವೋರ್ಸ್ ವದಂತಿಗೆ ಬಿಗ್ ಟ್ವಿಸ್ಟ್.. ಪತ್ನಿ ಸ್ವಪ್ನಾ ರಾವ್ ಕೊಟ್ಟ ಸ್ಪಷ್ಟನೆ ಏನು?







