ಬೆಂಗಳೂರು : ಶನಿವಾರ ನಗರ್ತಪೇಟೆಯಲ್ಲಿ ಸಂಭವಿಸಿರುವ ಘೋರ ಅಗ್ನಿ ದುರಂತ ಐವರನ್ನ ಬಲಿ ಪಡೆದಿದೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಘಟನಾ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಅಗ್ನಿ ಅವಘಡ ಸಂಭವಿಸಿದ ಕಟ್ಟಡ ಪರಿಶೀಲನೆ ಮಾಡಿದ್ದು, ದುರಂತ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರವಾಗಿ ಈ ಕಟ್ಟಡ ಕಟ್ಟಲಾಗಿದೆ. ಈ ಪರಿಸ್ಥಿತಿಗೆ ನಮ್ಮ ಸಾರ್ವಜನಿಕರನ್ನೇ ದೂರಬೇಕು ಎಂದಿದ್ದಾರೆ.

ಅವಘಡ ಸಂಭವಿಸಿದಾಗ ಅಗ್ನಿಶಾಮಕ ವಾಹನ ಬರುವುದಕ್ಕೆ ಆಗಿಲ್ಲ. ಒಂದೂವರೆ ಕಿಲೋ ಮೀಟರ್ನಿಂದ ನೀರು ತಂದು ಹಾಕಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರು ರಾಜಸ್ಥಾನ ಮೂಲದವರು. ಈಗಾಗಲೇ ಈ ಬಿಲ್ಡಿಂಗ್ ಮಾಲಿಕರಿಗೆ ನೋಟಿಸ್ ನೀಡಿ ಅರೆಸ್ಟ್ ಮಾಡಲಾಗಿದೆ. ಅಕ್ರಮವಾಗಿ ಕಟ್ಟಡ ಕಟ್ಟುವವರಿಗೆ ನೋಟಿಸ್ ನೀಡಬೇಕು. ಇಲ್ಲಿ ಒಂದು ಬಿಲ್ಡಿಂಗ್ ಬಿದ್ದರೆ ಅಕ್ಕ-ಪಕ್ಕದ ಕಟ್ಟಡಗಳು ಬೀಳುತ್ತೆ ಎಂದು ಹೇಳಿದ್ದಾರೆ.

ಮೊನ್ನೆ ವಿಲ್ಸನ್ ಗಾರ್ಡನ್ನಲ್ಲಿ ಮನೆಯಲ್ಲಿ ಸ್ಫೋಟ ಆಯ್ತು. ಇದೆಲ್ಲ ಬೆಂಗಳೂರಿಗೆ ಶೋಭೆ ತರುವಂತಹದಲ್ಲ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತೇವೆ. ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತೀರಾ ಅಂದರೆ ಸೇಫ್ಟಿ ಮಾಡಬೇಕು. ಸೇಫ್ಟಿ ಮಾಡಿಕೊಳ್ಳಲಿಲ್ಲ ಅಂದರೆ ಕಟ್ಟಡ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಕ್ಷೇತ್ರದ ಪರ ನಿಂತ ರಾಜ್ಯ ಬಿಜೆಪಿ.. ಶ್ರೀ ಮಂಜುನಾಥನ ದರ್ಶನ ಪಡೆದು ಧರ್ಮಾಧಿಕಾರಿಯನ್ನು ಭೇಟಿಯಾದ ವಿಜಯೇಂದ್ರ ಟೀಂ!







