ಬೆಂಗಳೂರು : ಬರೋಬ್ಬರಿ 1 ಲಕ್ಷ ಹಣ ಲಂಚ ಪಡೆಯುತ್ತಿದ್ದ ರಾಮಮೂರ್ತಿನಗರ ಪೊಲೀಸ್ ಠಾಣೆಯ ಭ್ರಷ್ಟ ಇನ್ಸ್ಪೆಕ್ಟರ್ ರಾಜಶೇಖರ್, PSI ರುಮನ್ ಪಾಷಾ ಮತ್ತು ಆತನ ಡ್ರೈವರ್ ಇಮ್ರಾನ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೋಟಿ ಕೋಟಿ ಲಂಚ ಕೊಟ್ಟಿದ್ದೇನೆ ಅಮ್ಮಿಕೊಂಡು ದುಡ್ಡು ಕೊಡಿ ಅಂತ ಬಂದ ಬಂದವರ ಬಳಿ.. ಅಂದ್ರೆ, ಲ್ಯಾಂಡ್ ಡಿಸ್ಪ್ಯೂಟ್, ಕಳ್ಳರು, ಡ್ರಗ್ ಸಪ್ಲೈಯರ್, ವಂಚಕರು ಸೇರಿ ಇನ್ನಿತರ ವ್ಯಕ್ತಿಗಳು ಠಾಣೆಗೆ ಬಂದಾಗ ಅವರಿಂದ ಮುಲಾಜಿಲ್ಲದೆ ಲಕ್ಷ ಲಕ್ಷ ಹಣ ಪೀಕ್ತಿದ್ದ ರಾಮಮೂರ್ತಿನಗರ ಠಾಣೆಯ ಭ್ರಷ್ಟ ಇನ್ಸ್ಪೆಕ್ಟರ್ ರಾಜಶೇಖರ್ ಸದ್ಯ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾನೆ. ಸ್ಥಳೀಯ ಜನ ನೂರು ಬಾರಿ ದೂರು ಕೊಟ್ಟರು ಈತನನ್ನು ವರ್ಗಾವಣೆ ಮಾಡಿರಲಿಲ್ಲ. ಇದೀಗ ಲಕ್ಷ ಲಂಚ ತಿನ್ನುವಾಗಲೇ ಇನ್ಸ್ಪೆಕ್ಟರ್ ರಾಜಶೇಖರ್ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

ಹೌದು.. ಇದೇ ತಿಂಗಳು 6ನೇ ತಾರೀಕು ಕೃಷ್ಣರಾಜಪುರದ ನಿವಾಸಿ ಗೋಪಿನಾಥ್ ಎಂಬವರು ‘ತನ್ನ ಹೆಂಡ್ತಿ ಜಾಯಿಂಟ್ ಅಕೌಂಟ್ನಲ್ಲಿರೋ 12 ಲಕ್ಷ ಹಣವನ್ನ ಹೊತ್ತೊಯ್ದಿದ್ದಾಳೆ. ಅಷ್ಟೇ ಅಲ್ಲ ಮನೆಯಲ್ಲಿಟ್ಟಿದ್ದ 620 ಗ್ರಾಂ ಚಿನ್ನಾಭರಣ ಕೂಡ ಕದ್ದು ಎಸ್ಕೇಪ್ ಆಗಿದ್ದಾಳೆ. ಹೀಗಾಗಿ ನನಗೆ ನನ್ನ ಹೆಂಡ್ತಿ ಬೇಡ ಸ್ವಾಮಿ, ನನ್ನ ಹಣ-ಚಿನ್ನಾಭರಣ ಕೊಡ್ಸಿ’ ಅಂತ ದೂರು ನೀಡಿದ್ದರು.

ಗೋಪಿನಾಥ್ನ ದೂರಿನಂತೆ ರಾಮಮೂರ್ತಿನಗರ ಪೊಲೀಸರು NCR ಮಾಡಿಕೊಂಡಿದ್ದರು. ಈ ಕೇಸನ್ನ PSI ರುಮನ್ ಪಾಷಾ ಹ್ಯಾಂಡಲ್ ಮಾಡ್ತಿದ್ದ. ತನಿಖೆ ವೇಳೆ ಎರಡು ಲಕ್ಷ ಕೊಡು ನಿನ್ನ ಹೆಂಡ್ತೀನ ಕರೆಸಿ ಹಣ-ಚಿನ್ನ ರಿಕವರಿ ಮಾಡ್ತೀನಿ ಎಂದು PSI ರುಮನ್ ಪಾಷಾ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಕೊನೆಗೆ 1.5 ಲಕ್ಷ ಕೊಡು ಮತ್ತೆ ಅಮೌಂಟ್ ಇಳ್ಸೋ ಮಾತೇ ಇಲ್ಲ ಅಂದಿದ್ದ.

‘ಅಯ್ಯೋ ಏನಪ್ಪಾ ಅನ್ಯಾಯ ಆಯ್ತು.. ರಿಕವರಿ ಮಾಡ್ಕೊಡಿ ಅಂದ್ರೂ ಕಾಸ್ ಕೇಳ್ತಾರಲ್ಲಪ್ಪ’ ಅಂತ ದೂರುದಾರ ಗೋಪಿನಾಥ್ ನೊಂದಿದ್ರು. ಆ ಬಳಿಕ ಗೋಪಿನಾಥ್ ತಮ್ಮ ವಕೀಲರಾದ ಮಂಜುನಾಥ್ ಸಲಹೆಯಂತೆ ಲೋಕಾಗೆ ದೂರು ನೀಡ್ತಾರೆ. ದೂರು ದಾಖಲಿಸಿಕೊಂಡ ಲೋಕಾ ಅಧಿಕಾರಿಗಳು ಭ್ರಷ್ಟ ಪೊಲೀಸರನ್ನು ಲಾಕ್ ಮಾಡೋಕೆ ಕಾದುಕುಳಿತಿರ್ತಾರೆ.
ಅದರಂತೆ PSI ರುಮನ್ ಪಾಷಾ ತನ್ನ ಡ್ರೈವರ್ ಬಳಿ ಗೋಪಿನಾಥ್ ಕಡೆಯಿಂದ ಒಂದು ಲಕ್ಷ ಹಣ ಪಡೀತಾನೆ. ಆ ಹಣವನ್ನ ಇನ್ಸ್ಪೆಕ್ಟರ್ ರಾಜಶೇಖರ್ಗೆ ನೀಡಿ ಇನ್ನೇನು ಹೊರಡಬೇಕು, ಅಷ್ಟರಲ್ಲಿ ಲೋಕಾಯುಕ್ತ DySP ಬಸವರಾಜ್ ಫುಲಾರಿ ಟೀಂ ರೆಡ್ ಹ್ಯಾಂಡಾಗಿ ಭ್ರಷ್ಟ ಪೊಲೀಸರನ್ನು ಲಾಕ್ ಮಾಡುತ್ತೆ. ಅಷ್ಟೇ.. ಇನ್ಸ್ ಪೆಕ್ಟರ್ ಸೇರಿ ಮೂವರು ಲಂಚಬಾಕರು ಅಲ್ಲೇ ಅರೆಸ್ಟ್ ಆಗ್ತಾರೆ.
ಇಲ್ಲಿ PSI ರುಮನ್ ಪಾಷಾ ಶಿವಾಜಿನಗರದಲ್ಲಿದ್ದಾಗ ಯಾವ್ದೋ ಕೇಸಲ್ಲಿ ತಗಲ್ಲಾಕ್ಕೊಂಡಿದ್ದನಂತೆ. ಆ ಕೇಸಿಂದ ಹೊರಬರೋಕೆ 50 ಲಕ್ಷ ಖರ್ಚು ಮಾಡಿದ್ದ ಎಂಬ ಆರೋಪವೂ ಕೇಳಿಬಂದಿದೆ. ಆ ಹಣವನ್ನ ರಿಕವರಿ ಮಾಡೋಕೆ ರುಮನ್ ಹೆವಿ ವಸೂಲಿ ಶುರು ಮಾಡಿದ್ದ. ಇದೀಗ ವಸೂಲಿ ಕೆಲಸ ಹೆಚ್ಚಾಗಿ ಎಲ್ಲರೂ ಲೋಕಾ ಬಲೆಗೆ ಬಿದ್ದಿದ್ದಾರೆ. ಸದ್ಯ ಕೃಷ್ಣಜನ್ಮಾಷ್ಟಮಿಯ ದಿನ ಸುಲಿಗೆ ಮಾಡೋಕೆ ಹೋದ ಇನ್ಸ್ಪೆಕ್ಟರ್ ರಾಜಶೇಖರ್ ಟೀಂ ಇದೀಗ ಅಂದರ್ ಆಗಿದೆ. ಲೋಕಾ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮಂಡ್ಯ ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ.. CL7 ಲೈಸೆನ್ಸ್ ನೀಡಲು 60ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಡಿಸಿ ನಾಗಶಯನ!







