ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿ 7 ಮಂದಿಯ ಜಾಮೀನು ಭವಿಷ್ಯ ನಾಳೆ ಸುಪ್ರೀಂ ಕೋರ್ಟ್ನಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ‘ಡಿ’ ಗ್ಯಾಂಗ್ಗೆ ನೀಡಿದ್ದ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವಾದ-ಪ್ರತಿವಾದವನ್ನು ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನಾಳೆ ದರ್ಶನ್‌ಗೆ ಜಾಮೀನೋ..ಜೈಲೋ..? ಅನ್ನೋ ತೀರ್ಪು ನೀಡುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರದ ಅರ್ಜಿಯನ್ನು ಜುಲೈ 24ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ ಮಾಡಿತ್ತು, ರಾಜ್ಯ ಸರ್ಕಾರದ ಪರವಾಗಿ ಸಿದ್ದಾರ್ಥ ಲೂತ್ರಾ ವಾದ ಮಂಡಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ನಿಮ್ಮ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿದ್ದರು. ಅದರಂತೆ ಪವಿತ್ರಾ ಗೌಡ, ದರ್ಶನ್ ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕಳೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ. ಜಾಮೀನು ನೀಡಲು ಹೇಗಾದ್ರೂ ಒಂದು ಅಂಶ ಸಿಗಲಿ ಎನ್ನುವ ಚಡಪಡಿಕೆ ಕಾಣುತ್ತಿದೆ. ಹೈಕೋರ್ಟ್ ಸೂಕ್ತವಾಗಿ ತನ್ನ ವಿವೇಚನೆ ಬಳಸಿಲ್ಲ ಎಂದು ನ್ಯಾ.ಪಾರ್ದಿವಾಲ ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ : ನಾನು ಕೇಂದ್ರಕ್ಕೆ ಹೋಗಲ್ಲ, ರಾಜ್ಯ ರಾಜಕೀಯದಲ್ಲೇ ಇರ್ತೀನಿ – ಸಿಎಂ ಸಿದ್ದರಾಮಯ್ಯ!







