ಶಿವಮೊಗ್ಗದ ಸ್ವಾತಂತ್ರ್ಯ ಶ್ರಾವಣ ಕಾರ್ಯಕ್ರಮದಲ್ಲಿ ಬಾಂಗ್ಲಾ, ನೇಪಾಳಿಯನ್ನರು ಭಾಗಿ – ವೀಸಾ ಸಂಬಂಧ ಪೊಲೀಸರ ನೋಟಿಸ್​ಗೆ ಸೂಲಿಬೆಲೆ ಆಕ್ರೋಶ!

ಬೆಂಗಳೂರು : ಶಿವಮೊಗ್ಗ ಕೋಟೆ ಠಾಣಾ ವ್ಯಾಪ್ತಿಯಲ್ಲಿ ಆ.14 ಮತ್ತು 15ರಂದು ಸ್ವಾತಂತ್ರ್ಯ ಶ್ರಾವಣ ಕಾರ್ಯಕ್ರಮ ಯುವ ಬ್ರಿಗೇಡ್ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನದ ಆಯೋಜನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ ಹಾಗೂ ನೇಪಾಳ ದೇಶದ ಪ್ರಜೆಗಳು ಭಾಗವಹಿಸಲಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಭಾಗಿಯಾಗಲು ವೀಸಾ ಪಡೆದಿದ್ದಾರೆಯೇ, ಪಡೆದಿದ್ದಲ್ಲಿ ಸದರಿ ದಾಖಲಾತಿ ಪ್ರತಿಯನ್ನು ನೀಡಬೇಕು ಎಂದು ಪೊಲೀಸರು ನೋಟೀಸ್ ನೀಡಿದ್ದಾರೆ. ಇದಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ಹೊರಹಾಕಿದ್ದಾರೆ.

ಇಂದೇ ಶುರುವಾಯ್ತು.. ಸ್ವಾತಂತ್ರ್ಯ ಶ್ರಾವಣ.. ಬಾಂಗ್ಲಾದವರೇಕೆ ಭಾರತದ ಸ್ವಾತಂತ್ರ್ಯ ಹಬ್ಬಕ್ಕೆ ಅಂತ ಪೊಲೀಸರು ಕೇಳಿದರಂತೆ. ಅದು ಅಖಂಡ ಭಾರತದ ಭಾಗ ಅಂತ ತಿಳಿಸಿ ಹೇಳೋದು ಹೇಗೆ? ಮಜವಾಗಿದೆ. ವೀಸಾ ಇಲ್ಲದೇ ಒಳ ನುಸುಳಿದವರಿಗೆ ಗಲಾಟೆ ಮಾಡಲು ಅನುಮತಿ ಇದೆ, ವೀಸಾ ಪಡೆದು ಬಂದವರಿಗೆ ಭಾರತವನ್ನು ಅಭಿನಂದಿಸಲು ಅವಕಾಶವಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೊಲೀಸ್ ನೋಟೀಸ್​ನಲ್ಲಿ ಏನಿದೆ? 

ಆ.14 ಮತ್ತು 15ರಂದು ಯುವ ಬ್ರಿಗೇಡ್ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನ ಸಮರ್ಪಿಸುವ ಸ್ವಾತಂತ್ರ್ಯ ಶ್ರಾವಣ ಕಾರ್ಯಕ್ರಮವನ್ನು ಕೋಟೆ ಠಾಣಾ ವ್ಯಾಪ್ತಿಯ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ-ಗಾಯತ್ರಿ ಮಾಂಗಲ್ಯ ಮಂದಿರದವರೆಗೆ ಮೆರವಣಿಗೆ ನಡೆಸಿ, ನಂತರ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಸ್ವಾತಂತ್ರ್ಯ ಶ್ರಾವಣ ಎಂಬ ಕಾರ್ಯಕ್ರಮದ ಅಂಗವಾಗಿ ಆ.14 ರಂದು ಸಂಜೆ 6.00 ರಿಂದ 7.00 ಗಂಟೆಯವರೆಗೆ ವಿಶೇಷ ಅಭ್ಯಾಗತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಆ.15ರಂದು ಬೆಳಗ್ಗೆ 7.00 ಗಂಟೆಯಿಂದ ಬೆಳಗ್ಗೆ 9.00 ಗಂಟೆವರೆಗೆ ವಿಶೇಷ ಶೋಭಯಾತ್ರೆ, ಧ್ವಜಾರೋಹಣ, ಅಭ್ಯಾಗತರ ನುಡಿ ಸಭಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರವೀಂದ್ರ ಘೋಷ್, ಅಧಿ ವಕ್ತಾ, ಸರ್ವೋಚ್ಚ ನ್ಯಾಯಾಲಯ ಬಾಂಗ್ಲಾದೇಶ, ಹಾಗೂ ಪ್ರೋ। ನಿರಂಜನ್ ಓಝಾ, ಅಧ್ಯಾಪಕರು ನೇಪಾಳರವರು ಭಾಗವಹಿಸುವ ಬಗ್ಗೆ ಮಾಹಿತಿ ಇದೆ. ಬಾಂಗ್ಲಾದೇಶ ಹಾಗೂ ನೇಪಾಳ ದೇಶದ ಪ್ರಜೆಗಳು ಭಾರತಕ್ಕೆ ಆಗಮಿಸಲು ವೀಸಾ ಪಡೆದಿದ್ದಾರೆಯೇ, ಸದರಿ ಕಾರ್ಯಕ್ರಮಕ್ಕೆ ಭಾಗಿ ಆಗಲು ವೀಸಾ ಪಡೆದಿರುತ್ತಾರೆಯೇ, ಪಡೆದಿದ್ದಲ್ಲಿ ಸದರಿ ದಾಖಲಾತಿ ಪ್ರತಿಯನ್ನು ಈ ದಿನದ ಒಳಗೆ ನೀಡಬೇಕು ಎಂದು ಪೊಲೀಸರು ನೋಟೀಸ್ ನೀಡಿದ್ದಾರೆ.

ಇದನ್ನೂ ಓದಿ : ‘ಕರಳೆ’ ಸಿನಿಮಾ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳಿಗೆ ‘iphone’ ಗಿಫ್ಟ್​​ ಕೊಟ್ಟ ಚಿತ್ರತಂಡ!  

Btv Kannada
Author: Btv Kannada

Read More